ಬೆಂಗಳೂರು,ಜೂ.27– ವಕ್ಫ್ ಆಸ್ತಿ ವಿಚಾರ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಎರಡೂ ಪ್ರಕರಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮಾಯಿ ಅವರಿಗೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಂತಾಗಿದೆ.ಬಸವರಾಜ ಬೊಮಾಯಿ ಹೇಳಿದ್ದ ಹೇಳಿಕೆಯಲ್ಲಿ ಪ್ರಚೋದನಕಾರಿ ಅಂಶಗಳಿಲ್ಲವೆಂದು ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಹೈ ಕೋರ್ಟ್ ನ್ಯಾಯಮೂರ್ತಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಏಕಸದಸ್ಯ ಪೀಠ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ಹಾಗೂ ಶಿಗ್ಗಾಂವಿ ಪೊಲೀಸ್ ಠಾಣೆಗಳಲ್ಲಿ 2024ರಲ್ಲಿ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಪ್ರಕರಣ ರದ್ದು ಕೋರಿ ಮಾಜಿ ಸಿಎಂ ಬಸವರಾಜ ಬೊಮಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಪ್ರಕರಣಗಳನ್ನು ರದ್ದುಗೊಳಿಸಿದೆ.
ಏನಿದು ಪ್ರಕರಣ?
ಈ ಹಿಂದೆ ಬೊಮಾಯಿ ಅವರು ಕೊಟ್ಟಿದ್ದ ಹೇಳಿಕೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿತ್ತು. ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್‌್ಫ ಆಸ್ತಿ ಎನ್ನುವಂತಾಗಿದೆ. ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು 3 ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್‌್ಫ ಆಸ್ತಿ ಎನ್ನುತ್ತಾರೆ ಎಂದು ಬಸವರಾಜ ಬೊಮಾಯಿ ಹೇಳಿಕೆ ನೀಡಿದ್ದರು. ಇದು ಪ್ರಚೋದಕಾರಿ ಮಾತು ಎಂದು ದೂರು ದಾಖಲಿಸಲಾಗಿತ್ತು.
ವಕ್‌್ಫ ಬೋರ್ಡ್ ಆಸ್ತಿ ವಿವಾದ ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡಿತ್ತು. ರೈತರು ಮತ್ತು ದೇವಾಲಯಗಳ ಆಸ್ತಿಗಳನ್ನು ಕಬಳಿಸಿದ್ದಕ್ಕಾಗಿ ವಕ್‌್ಫ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ 2024 ರ ನವೆಂಬರ್ನಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತು. ಬಳಿಕ ಭಾರತೀಯ ನ್ಯಾಯಸಂಹಿತಾ, 2023 (ಬಿಎನ್‌ಎಸ್) ಸೆಕ್ಷನ್ 196(1)(ಎ) (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು)ನಡಿ ಬಸವರಾಜ ಬೊಮಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣ ರದ್ದು ಕೋರಿ ಬೊಮಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.