ಬೆಂಗಳೂರು, ಮೇ 20– ದೇಶದ ಸೇನಾ ಕಾರ್ಯಚರಣೆ ಬಗ್ಗೆ ಕುಹುಕವಾಡಿದ್ದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಉಪಾಧ್ಯಕ್ಷ ಗಣೇಶ್ ಸಿಂಗ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಮಂದಿಯನ್ನು ಅವರ ಕುಟುಂಬದವರ ಸಮ್ಮುಖದಲ್ಲೇ ಹತ್ಯೆ ಮಾಡಿದ್ದ ಪಾಕಿಸ್ತಾನ ಉಗ್ರರಿಗೆ ಸಂಬಂಧಿಸಿದಂತೆ ಭಾರತವು ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 9ಉಗ್ರ ನೆಲೆಗಳನ್ನು ಮತ್ತು ಎಂಟು ವಾಯು ನೆಲೆಗಳನ್ನು ನಾಶ ಮಾಡಿತ್ತು.
ಮಾತ್ರವಲ್ಲ, ಪಾಕಿಸ್ತಾನಕ್ಕೆ ಸೇರಿದ ಎಫ್- 16 ಯುದ್ಧ ವಿಮಾನ ಹಾಗೂ ಚೀನಾ ದೇಶದ ಕ್ಷಿಪಣಿಗಳನ್ನು ಮತ್ತು ಡ್ರೋನ್ ಗಳನ್ನು ನಾಶ ಮಾಡಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಇಡೀ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತಪಡಿಸಿತ್ತು.
ಇಂತಹ ಸನ್ನಿವೇಶದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ಕೆಲ ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಭಾರತೀಯ ಸೇನೆ ನಾಲ್ಕು ವಿಮಾನಗಳನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಹಾರಾಡಿಸಿ ಬಡಾಯಿಕೊಚ್ಚಿಕೊಳ್ಳುತ್ತಿದೆ ಎಂದು ಲಘುವಾಗಿ ಮಾತನಾಡಿದ್ದರು.
ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿರುವ ದಾಳಿಗೆ ಸಾಕ್ಷ್ಯಗಳೇನು ? ಎಂಬ ಹೇಳಿಕೆ ನೀಡುವ ಮೂಲಕ ಭಾರತ ದೇಶಕ್ಕೆ ಮತ್ತು ಭಾರತೀಯ ಸೇನೆಗೆ ಕಳಂಕ ಹಚ್ಚುವ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನು ಎಸಗಿರುತ್ತಾರೆ.
ತಮ್ಮ ದೇಶದ್ರೋಹದ ಮಾತುಗಳ ಮೂಲಕ 140 ಕೋಟಿ ಭಾರತೀಯರ ಭಾವನೆಗಳಿಗೆ ದಕ್ಕೆ ತಂದಿರುವ ಹಾಗೂ ಬಹಿರಂಗವಾಗಿ ಭಾರತ ದೇಶ ಮತ್ತು ಭಾರತೀಯ ಸೇನೆಗೆ ಅವಮಾನಕರ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನೆಸಗಿರುವ ಶಾಸಕ ಕೊತ್ತೂರು ಮಂಜುನಾಥ್ರವರ ವಿರುದ್ಧ ಕೂಡಲೇ ದೇಶದ್ರೋಹದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ಸಂಬಂಧ ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದಾಖಲೆಗಳ ಸಹಿತ ಬನಶಂಕರಿ ಪೋಲೀಸ್ ಠಾಣೆಯಲ್ಲಿ ಗಣೇಶ್ ಸಿಂಗ್ ದೂರು ದಾಖಲಿಸಿದ್ದರು. ಇವರ ನೀಡಿರುವ ದೂರಿನ ಆಧಾರದ ಮೇಲೆ ಮಂಜುನಾಥ್ ಅವರ ವಿರುದ್ಧ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.