ಹಾಸನ,ಜ.13- ಸಕಲೇಶಪುರದಲ್ಲಿ ಇತ್ತಿಚೆಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಇತರರ ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.9 ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಭಾಷಣ ಮಾಡಿದ್ದರು.
ಗುಪ್ತ ಮಾಹಿತಿ ಸಿಬ್ಬಂದಿ ಶ್ರೀಧರ್ ಎಂ.ಕೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಿಎನ್‌ಎಸ್ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲಾಗಿದೆ. ಹಿಂದೂಗಳು ಮುಸ್ಲಿಂರಿಗೆ ಕುರಿಮಾಂಸ ಎಂದು ಹೇಳಿ ಕೊಡಿ ಅವರು ಹಲಾಲ್ ಆಗಿಲ್ಲ ಎಂದು ತಿನ್ನುವುದಿಲ್ಲ, ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ.
ಅದು ಸಗಣಿ ತಿಂದಂಗೆ, ಇದು ಸರಿನಾ ಎಂದು ಪ್ರಶ್ನಿಸಿದ್ದ ಮುತಾಲಿಕ್. 2003 ರಲ್ಲಿ ಸಕಲೇಶಪುರದಲ್ಲಿ ಹಿಂದೂಗಳ ಏರಿಯಾದಲ್ಲಿ ಮುಸ್ಲಿಂ ಸಮುದಾಯದವರು ಒಂದು ಗೋಮಾಂಸದ ಅಂಗಡಿಯನ್ನು ತೆರೆದಿದ್ದರು. ಆಗ ಹಿಂದೂಗಳು ಸುಮನೆ ಇರಲಿಲ್ಲ. ಅದೇ ಅಂಗಡಿಯ ಎದುರು ಒಂದು ಹಂದಿಮಾಂಸದ ಅಂಗಡಿಯನ್ನು ತೆರೆದರು.
ಮುಸ್ಲಿಂರು ಏನಾದರು ದನದ ಮಾಂಸದ ಅಂಗಡಿಯನ್ನು ತೆರೆದರೆ ನಿಮ ಮನೆಯ ಮುಂದೆ ಹಂದಿ ಕಡಿದು ತಿಂತೀವಿ. ನಮ ಸಹನೆಗೆ ಒಂದು ಮಿತಿ ಬೇಡವಾ ಆಕಳ ರಕ್ತ, ನಮ ರಕ್ತ, ಮುಂದಿನ ದಿನಗಳಲ್ಲಿ ನಾವು ಗೋಮಾತೆ ರಕ್ಷಣೆ ಮಾಡುತ್ತೇವೆ ಎಂದಿದ್ದ ಪ್ರಮೋದ್ ಮುತಾಲಿಕ್.
ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶ ಹಾಗು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಎಫ್‌ಐಆರ್ ದಾಖಲಿಸಲಾಗಿದೆ.