Saturday, September 13, 2025
Homeರಾಜ್ಯಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ಅನಿವಾರ್ಯ : ಸಿಎಂ

ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ಅನಿವಾರ್ಯ : ಸಿಎಂ

FIR against those who make provocative speeches is inevitable: CM

ಮೈಸೂರು, ಸೆ.13- ಶಾಂತಿ ಭಂಗಕ್ಕೆ ಪ್ರಯತ್ನಿಸಿ, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡಿ, ಪ್ರಚೋದನೆ ಮಾಡತ್ತಿದ್ದಾರೆ. ಶಾಂತಿ, ನೆಮದಿ, ಸೌಹಾರ್ದತೆ ಪಾಲನೆ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದರು.

ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದೂ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಾನು ಹಿಂದೂ ಅಲ್ಲವೇ? ನನ್ನ ಹೆಸರಿನಲ್ಲಿ ಇಬ್ಬರು ದೇವರ ಹೆಸರುಗಳಿವೆ. ಸಿದ್ದ ಎಂದರೆ ಈಶ್ವರನ ಹೆಸರು, ರಾಮ ವಿಷ್ಣುವಿನ ಹೆಸರು ಎಂದು ತಿರುಗೇಟು ನೀಡಿದರು.

ದಸರಾ ಮುಗಿಯುವವರೆಗೂ ಮಾಜಿ ಸಂಸದ ಪ್ರತಾಪ್‌ ಸಿಂಹನನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂಬ ವಿವಿಧ ಸಂಘಟನೆಗಳ ಬೇಡಿಕೆಯನ್ನು ಪೊಲೀಸರು ಪರಿಶೀಲಿಸುತ್ತಾರೆ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮಷ್ತಾಕ್‌ರನ್ನು ಆಯ್ಕೆ ಮಾಡಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು, ಯಾವ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂಬುದನ್ನು ವಿವರಣೆ ನೀಡಬೇಕು. ನ್ಯಾಯಾಲಯ ನೀಡುವ ತೀರ್ಮಾನವನ್ನು ಸರ್ಕಾರ ನಿರೀಕ್ಷಿಸುತ್ತಿದೆ. ದಸರಾ ಸಾಂಸ್ಕೃತಿಕ ಆಚರಣೆಯಾಗಿದ್ದು, ಇಂತಹದ್ದೇ ಧರ್ಮದವರು ಭಾಗವಹಿಸಬೇಕೆಂಬ ನಿಯಮಗಳಿಲ್ಲ ಎಂದರು.

ತನಿಖೆ ವಿಳಂಬವಿಲ್ಲ: ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆ ನಡೆಯುತ್ತಿದೆ. ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ತನಿಖೆಯಲ್ಲಿ ವಿಳಂಬವಾಗುತ್ತಿಲ್ಲ, ಅನಗತ್ಯವಾಗಿ ವಿಳಂಬ ಮಾಡುವಂತೆಯೂ ಇಲ್ಲ ಎಂದು ಹೇಳಿದರು.

ಮತಾಂತರ ಶೋಷಿತರ ಹಕ್ಕು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಹುಟ್ಟುಹಾಕಲಾಗುತ್ತಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಅರ್ಥಹಿನ. ಮುಂದೆ ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡುತ್ತದೆ. ಆಗ ಬಿಜೆಪಿಯವರು ಇದೇ ರೀತಿ ಮಾತನಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಮತಾಂತರ ಬೇಡವೆಂದು ನಾವು ಹೇಳಿದರೂ ವ್ಯವಸ್ಥೆಯ ಪರಿಣಾಮದಿಂದಾಗಿ ಮತಾಂತರವಾಗುತ್ತಾರೆ. ನಮ ಹಿಂದೂ ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಹಾಗೂ ಸಮಾನ ಅವಕಾಶಗಳಿಲ್ಲ ಅದಕ್ಕಾಗಿ ಮತಾಂತರವಾಗುತ್ತಿವೆ. ಅಸ್ಪಶ್ಯತೆ ಏಕೆ ಬಂತು. ಯಾವುದೇ ಧರ್ಮದಲ್ಲಿ ಅಸಮಾನತೆ ಇದ್ದರೂ ಶೋಷಣೆಗೆ ಒಳಗಾದವರಿಗೆ ಮತಾಂತರವಾಗುವ ಹಕ್ಕುಗಳಿರುತ್ತವೆ ಎಂದರು.

ಮತಾಂತರಗೊಂಡಿರುವವರು ಅದೇ ಧರ್ಮ ಅಥವಾ ಜಾತಿಯನ್ನು ಸಮೀಕ್ಷೆಯಲ್ಲಿ ಬರೆಸುತ್ತಾರೆ. ಒಂದು ವೇಳೆ ನಾನು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದೇನೆ ಎಂದು ಭಾವಿಸುವುದಾರೆ… ಮತಾಂತರವಾಗುವುದಿಲ್ಲ ಹಾಗೆ ಭಾವಿಸುವುದಾದರೆ ಸಮೀಕ್ಷೆಯಲ್ಲಿ ಮತಾಂತರವಾಗಿರುವ ಧರ್ಮವನ್ನೇ ಬರೆಸಬೇಕಾಗುತ್ತದೆ ಎಂದರು.

ವಿಪಕ್ಷಗಳ ಒತ್ತಡಕ್ಕೆ ಮಣಿದ ಪ್ರಧಾನಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರೊಧ ಪಕ್ಷಗಳ ಒತ್ತಡಕ್ಕೆ ಮಣಿದು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಗಲಾಟೆ ನಡೆಯುತ್ತಿದ್ದಾಗ ಅಲ್ಲಿಗೆ ಹೋಗಲಿಲ್ಲ. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವಾಗ ಭೇಟಿ ನೀಡಿದ್ದಾರೆ. ಎರಡು ವರ್ಷಗಳಿಂದ ಏಕೆ ಸುಮನಿದ್ದರು ಎಂದು ಪ್ರಶ್ನಿಸಿದರು.

ಬಿಜೆಪಿ ಮುಖ್ಯಮಂತ್ರಿಗಳಿಗೆ ತಿಳಿ ಹೇಳಲಿ:
ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟೆ ನಿರ್ಮಿಸಲು ಗೋವಾ ಸರ್ಕಾರ ಅಡ್ಡಿ ಪಡಿಸುತ್ತಿದೆ. ಆಲಮಟ್ಟಿ ಆಣೆಕಟ್ಟೆಯ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸಲು 2010ರಲ್ಲಿ 15 ವರ್ಷಗಳ ಹಿಂದೆಯೇ ನ್ಯಾಯಾಧೀಕರಣ ಆದೇಶ ನೀಡಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತದೆ.

ಕಾವೇರಿ ನದಿ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲಿತ ಆಣೆಕಟ್ಟು ನಿರ್ಮಿಸಲು ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಗಳ ಮುಖ್ಯಮಂತ್ರಿಯವರಿಗೆ ತಿಳಿ ಹೇಳಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ ಅವರಿಗೆ ಬುದ್ಧಿ ಹೇಳಲಿ ಎಂದರು.

ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ:
ಹಾಸನ ಗಣೇಶೋತ್ಸವದ ವೇಳೆ ಲಾರಿ ಹರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ನೀಡಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಪರಿಹಹಾರ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.

ಹಾಸನದ ದುರಂತವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದರೆ, ಇದೇ ರೀತಿಯ ಇತರ ಪ್ರಕರಣಗಳನ್ನು ಪರಿಗಣಿಸಬೇಕಾಗುತ್ತದೆ. ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಇದು ಸಾವಿಗೆ ಸಮವಲ್ಲ. ಆದರೆ ಕುಟುಂಬದ ಜೊತೆ ನಾವಿದ್ದೇವೆ ಎಂದು ಮಾನಸಿಕ ಸ್ಥೈರ್ಯ ತುಂಬುವ ಕ್ರಮ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅಪಘಾತ ಆಕಸಿಕ ಘಟನೆ ಅದಕ್ಕೆ ಸರ್ಕಾರವೇ ಹೊಣೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

RELATED ARTICLES

Latest News