ಬೆಂಗಳೂರು, ಜು.1– ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.ಆಸ್ಪತ್ರೆಯಲ್ಲಿ ದಟ್ಟ ಹೊಗೆಯಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮುನ್ನೆಚ್ಚರಿಕಾ ಕ್ರಮವಾಗಿ 26 ರೋಗಿಗಳನ್ನು ತಕ್ಷಣ ಆಸ್ಪತ್ರೆಯ ಎಚ್ ಬ್ಲಾಕ್‌ಗೆ ಸ್ಥಳಾಂತರಿಸುವ ಮೂಲಕ ಯಾವುದೇ ತೊಂದರೆಯಾಗದಂತೆ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಮುಂಜಾನೆ 3 ಗಂಟೆ ಸುಮಾರಿನಲ್ಲಿ ನೆಲಮಹಡಿಯಲ್ಲಿನ ಸುಟ್ಟಗಾಯಗಳ ವಿಭಾಗಜಕದಲ್ಲಿರುವ ಸೆಮಿನಾರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ.ತಕ್ಷಣ ಅಗ್ನಿಶಾಮಕ ದಳಕ್ಕೆ ಆಸ್ಪತ್ರೆ ಸಿಬ್ಬಂದಿ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಡ್ಯೂಟಿ ಡಾಕ್ಟರ್ ದಿವ್ಯಾ ಅವರ ನೇತೃತ್ವದ ತಂಡದವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂಜಾನೆ 3.30ರ ಸುಮಾರಿನಲ್ಲಿ ಡಾ.ದಿವ್ಯಾ ಅವರು ಮೊದಲ ಮಹಡಿಗೆ ಹೋಗಿದ್ದಾಗ ನೆಲಮಹಡಿ ಸೆಮಿನಾರ್ ರೂಮ್‌ನಲ್ಲಿ ಹೊಗೆ ಮತ್ತು ಬೆಂಕಿ ಹೊತ್ತಿಕೊಂಡಿರುವುದು ಗಮನಿಸಿದ್ದಾರೆ.
ತಕ್ಷಣ ಅಲರ್ಟ್ ಆದ ದಿವ್ಯಾ ಅವರು ಆಸ್ಪತ್ರೆ ಸಿಬ್ಬಂದಿಗಳಿಗೆ ಕೋಡ್ ರೆಡ್ ಅಲರ್ಟ್ ಮಾಡಿ ರೋಗಿಗಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರಲ್ಲದೆ ಸೂಪರಿಟೆಂಡೆಂಟ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಬೆಂಕಿ ನಂದಿಸುವ ಪ್ರಯತ್ನದ ಜೊತೆಗೆ ಹಿರಿಯ ಅಧಿಕಾರಿಗಳಿಗೂ ಡಾ.ದಿವ್ಯಾ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 30 ನಿಮಿಷದಲ್ಲಿ ಆಸ್ಪತ್ರೆಯ ಐಸಿಯುನಲ್ಲಿದ್ದವರು ಸೇರಿ ಒಳರೋಗಿಗಳನ್ನು ಪಕ್ಕದ ಬ್ಲಾಕ್‌ಗೆ ಸ್ಥಳಾಂತರಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.