ಬೆಳಗಾವಿ,ಡಿ.12- ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 14 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಎದುರಾಗಿದ್ದು, ಮುಂಬರುವ ದಿನಗಳಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ಕೊರತೆಯನ್ನು ಸರಿದೂಗಿಸುವುದಾಗಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ತಿಪ್ಪೇಸ್ವಾಮಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈ ಹಿಂದೆ 5 ವರ್ಷ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದೇಒಂದು ಬಾರಿಯೂ ವಿತ್ತೀಯ ಕೊರತೆ ಎದುರಾಗಿರಲಿಲ್ಲ. ಆದರೆ ಈ ಬಾರಿ 14 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಎದುರಾಗಿದೆ. ಕೆಲವು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲಾಗುವುದು. ಯಾವುದೇ ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿದ್ದರೆ ಮಾತ್ರ ಅಧಿಕಾರಗಳು ಸುಗಮವಾಗಿ ನಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರಸಕ್ತ ವರ್ಷ ಸ್ವಲ್ಪ ಬಿಗಿಯಾಗಿ ಖರ್ಚುಗಳಿಗೆ ಕಡಿವಾಣ ಹಾಕಬೇಕೆಂದು ತೀರ್ಮಾನಿಸಿದ್ದೇವೆ. ಅನಗತ್ಯ ಖರ್ಚುಗಳನ್ನು ಕಡಿತ ಮಾಡಲಾಗುತ್ತದೆ. ವಿತ್ತೀಯ ಕೊರತೆ ಎದುರಾಗಿದ್ದರೂ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರವೇ ನಮ ಸಾಲದ ಪ್ರಮಾಣವಿದೆ ಎಂದು ವಿವರಿಸಿದರು.
2024-25ನೇ ಸಾಲಿನಲ್ಲಿ 3,70,000 ಕೋಟಿ ರೂ.ಗೂ ಅಧಿಕ ಗಾತ್ರದ ಬಜೆಟ್ ಮಂಡನೆ ಮಾಡಿದ್ದೇವೆ. ಇದರಲ್ಲಿ 1,20,000 ಕೋಟಿ ರೂ. ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದೇವೆ. ಬಜೆಟ್ನಲ್ಲಿ 52,009 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದೇವೆ. ವಿರೋಧಪಕ್ಷಗಳು ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಧಾರರಹಿತ ಆರೋಪ. ಎಲ್ಲಿ ಅಭಿವೃದ್ಧಿ ಕುಂಠಿತವಾಗಿದೆ? ಎಂದು ವಿರೋಧಪಕ್ಷಗಳಿಗೆ ಸಿಎಂ ಸವಾಲು ಹಾಕಿದರು.
ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಪ್ರತಿಪಕ್ಷದವರು ಟೀಕೆ ಮಾಡುತ್ತಲೇ ಇದ್ದಾರೆ. ಬೊಕ್ಕಸ ಖಾಲಿಯಾಗಿದೆ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದುದು. ಇದರಲ್ಲಿ ಯಾವುದೇ ಹುರುಳಿಲ್ಲ. ನಾವು ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಅನುದಾನ ಇಟ್ಟಿದ್ದೇವೋ, ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಒದಗಿಸಿದ್ದೇವೆ. ಸ್ವಲ್ಪ ಹೆಚ್ಚಾದರೂ ಆಗಬಹುದು, ಕಡಿಮೆಯಾದರೂ ಆಗಬಹುದು. ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದರೆ ದುಡ್ಡು ಖರ್ಚು ಮಾಡಲೇಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಷಯವಲ್ಲವೇ ಎಂದು ಹೇಳಿದರು.
ನಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಟ್ಟು 1.20 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಕಳೆದ ವರ್ಷ 95 ಸಾವಿರ ಕೋಟಿ ರೂ. ಇತ್ತು. ಯಾವ ರಾಜ್ಯಗಳು ಎಷ್ಟು ಸಾಲ ಮಾಡಬೇಕೆಂಬುದನ್ನು ಕೇಂದ್ರ ಸರ್ಕಾರ ವರದಿ ಮಾಡುತ್ತದೆ. ವಿತ್ತೀಯ ಕಾಯ್ದೆ ಪ್ರಕಾರ ನಾವು ಸಾಲ ಮಾಡಿಕೊಂಡಿದ್ದೇವೆ. ವಿತ್ತೀಯ ಕೊರತೆ ಪ್ರಕಾರ ಸಾಲದ ಪ್ರಮಾಣ ಶೇ.25ರೊಳಗಿರಬೇಕು. ಅಷ್ಟರೊಳಗೆ ನಾವಿದ್ದೇವೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಜಿಎಸ್ಬಿಟಿ 2.9 ಇದ್ದರೆ ಸಾಲದ ಪ್ರಮಾಣ 23. ಆಂಧ್ರಪ್ರದೇಶ 4.2 ಸಾಲದ ಪ್ರಮಾಣ 34. ಅಸ್ಸಾಂ 3.5 ಸಾಲದ ಪ್ರಮಾಣ 25. ಹಿಮಾಚಲ ಪ್ರದೇಶ 4.7, 44 ಸಾಲದ ಪ್ರಮಾಣ, ಕೇರಳ 3.4 ಸಾಲದ ಪ್ರಮಾಣ 37, ಮಹಾರಾಷ್ಟ್ರ 2.6 ಸಾಲದ ಪ್ರಮಾಣ 19, ಮಧ್ಯಪ್ರದೇಶ 4.1 ಸಾಲದ ಪ್ರಮಾಣ 29, ಪಂಜಾಬ್ 3.8 ಸಾಲದ ಪ್ರಮಾಣ 28, ರಾಜಸ್ಥಾನ 2.9 ಸಾಲದ ಪ್ರಮಾಣ 26, ತಮಿಳುನಾಡು 3.4 ಸಾಲದ ಪ್ರಮಾಣ 31, ತೆಲಂಗಾಣ 3 ಸಾಲದ ಪ್ರಮಾಣ 28, ಉತ್ತರಪ್ರದೇಶ 3.5 ಸಾಲದ ಪ್ರಮಾಣ 29 ಎಂದು ವಿವರಿಸಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವಿತ್ತೀಯ ಕೊರತೆ ಪ್ರಮಾಣ ತುಂಬಾ ಕಡಿಮೆ ಇದೆ. ಹಾಗಾಗಿ ನಾವು ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯಲಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಈ ಹಂತದಲ್ಲಿ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ 52 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೀರಿ. ಇದಕ್ಕೆ ನಮ ತಕರಾರು ಏನೂ ಇಲ್ಲ. ಆದರೆ ಎಸ್ಸಿಪಿಟಿಎಸ್ಪಿ ಮೀಸಲಿಟ್ಟಿದ್ದ 14 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಯೋಜನೆಗೆ ಬಳಸಿಕೊಂಡಿದ್ದೀರಿ. ಆಲ್ಲದೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ನಾವ್ಯಾರೂ ಹೇಳಿಲ್ಲ. ಅಭಿವೃದ್ಧಿ ಕೆಲಸ ಮಾಡಲು ನಾನು ಆತಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇನೆ ಎಂದು ನಿಮ ಪಕ್ಷದ ಶಾಸಕರೇ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಾವು ಪ್ರಸಕ್ತ ವರ್ಷ ಎಸ್ಸಿಪಿಟಿಎಸ್ಪಿಗೆ 39,372 ಹಣವನ್ನು ಮೀಸಲಿಟ್ಟಿದ್ದೇವೆ. ಈ ಯೋಜನೆ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಇದೆ. ಗುತ್ತಿಗೆದಾರರಿಗೂ ನಾವು ಮೀಸಲಾತಿ ನೀಡಿದ್ದೇವೆ. ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಇದನ್ನು ಜಾರಿ ಮಾಡಿ ಎಂದು ಪ್ರತಿಸವಾಲು ಎಸೆದರು.
ಕೇಂದ್ರ ಸರ್ಕಾರ 48 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುತ್ತದೆ. ಎಸ್ಸಿ/ಎಸ್ಟಿ ಕಲ್ಯಾಣಕ್ಕೆ ಕೊಡುವುದು ಕೇವಲ 60 ಸಾವಿರ ಕೋಟಿ ರೂ. ಎಸ್ಸಿಪಿಟಿಎಸ್ಪಿ ಯೋಜನೆಯನ್ನು ಕೇಂದ್ರದಲ್ಲೇ ಅನುಷ್ಠಾನ ಮಾಡಿ ಎಂದು ನಿಮ ಪ್ರಧಾನಿಗೆ ಒತ್ತಡ ಹಾಕಿ. ಸುಮನೆ ಇಲ್ಲಿ ರಾಜಕೀಯಕ್ಕೋಸ್ಕರ ಮಾತನಾಡುವುದು ಸರಿಯಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಆಗ ಮತ್ತೆ ಗದ್ದಲ ಉಂಟಾಯಿತು.
ಗದ್ದಲದ ನಡುವೆಯೇ ಖನಿಜ ಹಕ್ಕುಗಳ ತೆರಿಗೆ ಹಾಕಲು ರಾಜ್ಯಸರ್ಕಾರಕ್ಕೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. ನಮಗೆ 4,700 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ವಿವರಿಸಿದರು.