Sunday, October 26, 2025
Homeರಾಷ್ಟ್ರೀಯ | Nationalಜಾರ್ಖಂಡ್‌ : ವೈದ್ಯರ ನಿರ್ಲಕ್ಷ್ಯದಿಂದ ಎಚ್‌ಐವಿಗೆ ತುತ್ತಾದ ಐವರು ಮಕ್ಕಳು

ಜಾರ್ಖಂಡ್‌ : ವೈದ್ಯರ ನಿರ್ಲಕ್ಷ್ಯದಿಂದ ಎಚ್‌ಐವಿಗೆ ತುತ್ತಾದ ಐವರು ಮಕ್ಕಳು

Five children test HIV positive at Jharkhand hospital after blood transfusion

ರಾಂಚಿ,ಅ.26- ವೈದ್ಯರ ನಿರ್ಲಕ್ಷ್ಯದಿಂದ ಜಾರ್ಖಂಡ್‌ನ ಆಸ್ಪತ್ರೆಯೊಂದರಲ್ಲಿ ರಕ್ತ ಪಡೆದ ಐವರು ಮಕ್ಕಳು ಎಚ್‌ಐವಿಗೆ ತುತ್ತಾಗಿರುವ ಆಘಾತಕಾರಿ ಘಟನೆ ನಡೆದಿದೆ. ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಚೈಬಾಸಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ ಏಳು ವರ್ಷದ ಥಲಸ್ಸೆಮಿಯಾ ರೋಗಿ ಸೇರಿದಂತೆ ಕನಿಷ್ಠ ಐದು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್‌ ಕಾಣಿಸಿಕೊಂಡಿದೆ.

ಈ ಘಟನೆಯು ರಾಜ್ಯದ ಆರೋಗ್ಯ ಇಲಾಖೆಯಾದ್ಯಂತ ಆಕ್ರೋಶ ಮತ್ತು ಭೀತಿ ಹುಟ್ಟುಹಾಕಿದ್ದು, ರಾಂಚಿಯ ಉನ್ನತ ಮಟ್ಟದ ವೈದ್ಯಕೀಯ ತಂಡವು ತಕ್ಷಣದ ತನಿಖೆಗೆ ಆದೇಶಿಸಿದೆ. ಥಲಸ್ಸೆಮಿಯಾ ಪೀಡಿತ ಮಗುವಿನ ಕುಟುಂಬವು ಚೈಬಾಸಾ ಸದರ್‌ ಆಸ್ಪತ್ರೆಯ ರಕ್ತನಿಧಿಯಲ್ಲಿ ಎಚ್‌ಐವಿ ಸೋಂಕಿತ ರಕ್ತವನ್ನು ಮಗುವಿಗೆ ನೀಡಲಾಗಿತ್ತು. ಮೊದಲನೆಯದಾಗಿ ಈ ಘಟನೆ ಬೆಳಕಿಗೆ ಬಂದಿತ್ತು.

ಈ ಮಕ್ಕಳು ಥಲಸ್ಸೆಮಿಯಾ ರೋಗ ಪೀಡಿತರಾಗಿದ್ದರು. ಮಕ್ಕಳಿಗೆ ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತರ ರಕ್ತ ನೀಡಲಾಗಿದೆ ಎಂದು ಏಳು ವರ್ಷದ ಮಗುವಿನ ಕುಟುಂಬ ಆರೋಪಿಸಿದೆ. ರಾಂಚಿಯ ಐದು ಸದಸ್ಯರ ವೈದ್ಯಕೀಯ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಮಕ್ಕಳಿಗೆ ಸೋಂಕಿತ ರಕ್ತ ಹೇಗೆ ದೊರೆತಿದೆ ಎಂಬುದನ್ನು ಕಂಡುಹಿಡಿಯಲು ಜಾರ್ಖಂಡ್‌ ಸರ್ಕಾರ ವೈದ್ಯಕೀಯ ತಂಡವನ್ನು ರಚಿಸಿದೆ.

ತಂಡದ ತಪಾಸಣೆಯ ಸಮಯದಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಬಾಲಕನ ಜತೆ ಇನ್ನೂ ನಾಲ್ಕು ಮಕ್ಕಳು ಎಚ್‌ಐವಿ-ಪಾಸಿಟಿವ್‌ ಎಂದು ಕಂಡುಬಂದಿದ್ದು, ಒಟ್ಟು ಪೀಡಿತ ಅಪ್ರಾಪ್ತ ಮಕ್ಕಳ ಸಂಖ್ಯೆ ಐದಕ್ಕೆ ಏರಿದೆ. ಎಲ್ಲಾ ಮಕ್ಕಳು ಒಂದೇ ಆಸ್ಪತ್ರೆಯಲ್ಲಿ ರಕ್ತ ಪಡೆದಿದ್ದರು.

ಆರಂಭಿಕ ತನಿಖೆಯಲ್ಲಿ ಥಲಸ್ಸೆಮಿಯಾ ರೋಗಿಗೆ ಕಲುಷಿತ ರಕ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯ ಸಮಯದಲ್ಲಿ ರಕ್ತ ಬ್ಯಾಂಕಿನಲ್ಲಿ ಕೆಲವು ವ್ಯತ್ಯಾಸಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಾ.ದಿನೇಶ್‌ಕುಮಾರ್‌ ತಿಳಿಸಿದ್ದಾರೆ.

ಮೊದಲ ಸೋಂಕಿತ ಮಗುವಿನ ಕುಟುಂಬವು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದು, ನ್ಯಾಯವನ್ನು ಕೋರಿದೆ. ಸ್ಥಳೀಯ ಪ್ರತಿನಿಧಿಗಳು ಸಹ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ರಕ್ತ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ಹಲವಾರು ಅಕ್ರಮಗಳು ಕಂಡುಬಂದಿವೆ. ರಕ್ತದ ಮಾದರಿ ಪರೀಕ್ಷೆ, ದಾಖಲೆ ನಿರ್ವಹಣೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಅನುಸರಣೆಯಲ್ಲಿನ ದೋಷಗಳು ಸೇರಿದಂತೆ, ಈ ಅಕ್ರಮಗಳನ್ನು ವಿವರಿಸುವ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದೆ.

ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತ ರಕ್ತ ವರ್ಗಾವಣೆಯಾಗಿದೆ. ಈ ಬ್ಲಡ್‌ ಬ್ಯಾಂಕ್‌ನಿಂದ 25 ಯೂನಿಟ್‌ಗಳ ರಕ್ತ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಸುಶಾಂತೋ ಮಜ್ಹೀ, ಆದಾಗ್ಯೂ, ಒಂದು ವಾರದ ಹಿಂದೆ ಮಗುವಿಗೆ ಎಚ್‌ಐವಿ ಪಾಸಿಟಿವ್‌ ಇರುವುದನ್ನು ಪತ್ತೆ ಮಾಡಿದ್ದರು. ಕಲುಷಿತ ಸೂಜಿಗಳಿಂದ ಚುಚ್ಚಿಸಿಕೊಳ್ಳುವುದು ಸೇರಿದಂತೆ ಇತರ ಅಂಶಗಳಿಂದಾಗಿ ಎಚ್‌ಐವಿ ಸೋಂಕು ಸಂಭವಿಸಬಹುದು ಎಂದು ಅವರು ಹೇಳಿದರು.

ಜಾರ್ಖಂಡ್‌ನ ನಿರ್ದೇಶಕ (ಆರೋಗ್ಯ ಸೇವೆಗಳು) ಡಾ. ದಿನೇಶ್‌ ಕುಮಾರ್‌ ನೇತೃತ್ವದ ಐದು ಸದಸ್ಯರ ತಂಡವು ಸದರ್‌ ಆಸ್ಪತ್ರೆಯ ರಕ್ತನಿಧಿ ಮತ್ತು ಮಕ್ಕಳ ತೀವ್ರ ನಿಗಾ ಘಟಕದ ವಾರ್ಡ್‌ ಅನ್ನು ಪರಿಶೀಲಿಸಿದೆ ಮತ್ತು ಮಕ್ಕಳಿಂದ ವಿವರಗಳನ್ನು ಸಂಗ್ರಹಿಸಿದೆ.

ಪ್ರಸ್ತುತ, ಪಶ್ಚಿಮ ಸಿಂಗ್ಭೂಮ್‌ ಜಿಲ್ಲೆಯಲ್ಲಿ 515 ಎಚ್‌ಐವಿ-ಪಾಸಿಟಿವ್‌ ಪ್ರಕರಣಗಳು ಮತ್ತು 56 ಥಲಸ್ಸೆಮಿಯಾ ರೋಗಿಗಳಿದ್ದಾರೆ. ಕುಮಾರ್‌ ನೇತೃತ್ವದ ತನಿಖಾ ತಂಡದಲ್ಲಿ ಡಾ. ಶಿಪ್ರಾ ದಾಸ್‌‍, ಡಾ. ಎಸ್‌‍. ಎಸ್‌‍. ಪಾಸ್ವಾನ್‌, ಡಾ. ಭಗತ್‌, ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಸುಶಾಂತೋ ಮಜ್ಹೀ, ಡಾ. ಶಿವಚರಣ್‌ ಹನ್ಸ್ದಾ ಮತ್ತು ಡಾ. ಮಿನು ಕುಮಾರಿಸೇರಿದ್ದಾರೆ.

RELATED ARTICLES

Latest News