ಹೈದರಾಬಾದ್,ಆ.18- ಶ್ರೀಕೃಷ್ಣ ಜನಾಷ್ಟಮಿ ಪ್ರಯುಕ್ತ ನಡೆದ ಮೆರವಣಿಗೆ ವೇಳೆ ರಥವೊಂದು ವಿದ್ಯುತ್ ತಂತಿಗಳಿಗೆ ತಾಕಿದ ಪರಿಣಾಮ ಸಂಭವಿಸಿದ ಅವಘಡದಲ್ಲಿ ಐವರು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12:30ರ ಸುಮಾರಿಗೆ ರಾಮಂತಪುರದ ಗೋಕುಲನಗರದಲ್ಲಿ ಶೋಭಾ ಯಾತ್ರಯಲ್ಲಿನ ಈ ದುರಂತ ಸಂಭವಿಸಿದೆ.
ಮೃತರನ್ನು ಕೃಷ್ಣ ಯಾದವ್ (21), ಸುರೇಶ್ ಯಾದವ್ (34), ಶ್ರೀಕಾಂತ್ ರೆಡ್ಡಿ (35), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದ್ದು, ಗಾಯಗೊಂಡವರಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿಯ ಗನ್‌ಮ್ಯಾನ್ ಶ್ರೀನಿವಾಸ್ ಕೂಡ ಸೇರಿದ್ದಾರೆ. ಸುಮಾರು 10 ಮಂಧಿ ಗಾಯಗೊಂಡವರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ದೇಹಗಳನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ. ಭಾರೀ ಮಳೆಯ ನಡುವೆಯೂ ರಾತ್ರಿ 9 ಗಂಟೆಗೆ ಆರಂಭವಾದ ಈ ಯಾತ್ರೆಯು ಮಧ್ಯರಾತ್ರಿಯ ವೇಳೆಗೆ ಯಾದವ ಸಂಘದ ಬಳಿಗೆ ತಲುಪಿತು. ರಥವನ್ನು ಜೀಪ್‌ನಿಂದ ಎಳೆಯಲಾಗುತ್ತಿತ್ತು. ಜೀಪ್‌ನ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಾಗ, ಭಕ್ತರು ರಥವನ್ನು ಕೈಯಿಂದ ತಳ್ಳಿದ್ದಾರೆ. ಈ ವೇಳೆ ರಥದ ಮೇಲ್ಭಾಗವು 11 ಕೆವಿ ವಿದ್ಯುತ್ ತಂತಿಗಳಿಗೆ ತಾಕಿದ್ದು, ರಥವನ್ನು ಹಿಡಿದಿದ್ದವರಿಗೆ ವಿದ್ಯುತ್ ಶಾಕ್ ತಗುಲಿದೆ.
ಇನ್ನೂ ರಥದ ಮೇಲೆ ಇದ್ದ ಪೂಜಾರಿ ರಥದ ಲೋಹದ ಭಾಗವನ್ನು ಹಿಡಿಯದೇ ಇದ್ದ ಕಾರಣ ಯಾವುದೇ ಗಾಯವಿಲ್ಲದೇ ಪಾರಾಗಿದ್ದಾರೆ. ವಿದ್ಯುತ್ ಶಾಕ್‌ನಿಂದ ರಥದ ಸುತ್ತಲೂ ಇದ್ದವರು ಕೆಳಗೆ ಬಿದ್ದಿದ್ದು, ವಿದ್ಯುತ್ ವೈರ್‌ಗಳಿಂದ ಬೆಂಕಿಯ ಕಿಡಿಗಳು ಬೀಳುತ್ತಿತ್ತು ದೃಶ್ಯ ಭಯಾನಕವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.