ಮುಜಫರ್‌ಪುರ, ಫೆ.2- ಮಹಾಕುಂಭದಲ್ಲಿ ಪಾಲ್ಗೊಂಡು ಪ್ರಯಾಗ್‌ರಾಜ್‌ನಿಂದ ಹಿಂತಿರುಗುತ್ತಿದ್ದ ಐವರು ನೇಪಾಳ ಪ್ರಜೆಗಳು ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ.
ಮಧುಬನಿ ಚತುಷ್ಪಥ ಬೈಪಾಸ್‌ನಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಎಸ್‌ಯುವಿ ಸಾಹಸ ಪ್ರದರ್ಶಿಸುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೊ ಎಸ್‌ಯುವಿ ಐದು ಬಾರಿ ಪಲ್ಟಿಯಾಗಿದೆ.
ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಪುಡಿಯಾಗಿವೆ. ಕಾರು ಪಲ್ಟಿಯಾಗುತ್ತಿದ್ದಂತೆ ಅದರ ಒಂದು ಟೈರ್ ಒಡೆದು ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಒಂಬತ್ತು ಜನರಿದ್ದರು – ಈ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಅರ್ಚನಾ ಠಾಕೂರ್, ಇಂದು ದೇವಿ, ಮಂತರ್ಣಿ ದೇವಿ, ಬಾಲ ಕಷ್ಣ ಝಾ ಮತ್ತು ಚಾಲಕ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಮನೋಹರ್ ಠಾಕೂರ್, ಸಷ್ಟಿ ಠಾಕೂರ್, ಕಮ್ನಿ ಝಾ ಮತ್ತು ದೇವತಾರಣ ದೇವಿಯಾಗಿದ್ದಾರೆ. ಇವರೆಲ್ಲರೂ ನೇಪಾಳದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.