ಬೆಂಗಳೂರು,ಸೆ.17- ವಿಳಾಸ ಕೇಳುವ ನೆಪದಲ್ಲಿ ಹಾಗೂ ಮಾರಕಾಸ್ತ್ರದಿಂದ ಬೆದರಿಸಿ ಮೊಬೈಲ್‌ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗುತ್ತಿದ್ದ 5 ಮಂದಿ ದರೋಡೆಕೋರರನ್ನು ದಕ್ಷಿಣ ವಿಭಾಗದ ಪುಟ್ಟೇನಹಳ್ಳಿ ಹಾಗೂ ಹನುಮಂತನಗರ ಠಾಣೆ ಪೊಲೀಸರು ಬಂಧಿಸಿ 5.75 ಲಕ್ಷ ರೂ. ಬೆಲೆ ಬಾಳುವ 26 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪುಟ್ಟೇನಹಳ್ಳಿ:
ಡೆಲಿವರಿ ಬಾಯ್ ಒಬ್ಬರು ಡಾಲಿಯ ಮೇಲ್ಸೇತುವೆ ಬಳಿ ಲೊಕೇಷನ್ ಸರ್ಚ್ ಮಾಡುತ್ತಿದ್ದಾಗ ಇಬ್ಬರು ದರೋಡೆಕೋರರು ವಿಳಾಸ ಕೇಳುವ ನೆಪದಲ್ಲಿ ಫುಡ್ ಡೆಲಿವರಿ ಬಾಯ್ ಗಮನಸೆಳೆದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರನ್ನು ಬಂಧಿಸಿ 4.17 ಲಕ್ಷ ರೂ. ಬೆಲೆ ಬಾಳುವ 20 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೊಬೈಲ್ ಸುಲಿಗೆ ಹಾಗೂ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಅದನ್ನು ಸ್ನೇಹಿತರಿಗೆ ಕೊಟ್ಟಿರುವುದಾಗಿ ಹೇಳಿದ ಮೇರೆಗೆ ಅವರುಗಳಿಂದ 20 ಮೊಬೈಲ್ ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್‌ಸ್ಪೆಕ್ಟರ್ ರಾಧಾಕೃಷ್ಣ ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಹನುಮಂತನಗರ:
ಆಟೋ ರಿಕ್ಷಾದಲ್ಲಿ ಬಂದು ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿ 1.60 ಲಕ್ಷ ರೂ. ಮೌಲ್ಯದ 6 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು, ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ರಾತ್ರಿ ಮನೆ ಮುಂದೆ ವಾಯುವಿಹಾರ ಮಾಡುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ದರೋಡೆಕೋರರು ಮಚ್ಚು ತೋರಿಸಿ ಬೆದರಿಸಿ ಮೊಬೈಲ್ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡ ಪೊಲೀಸರು ಕಲಾಸಿಪಾಳ್ಯ ಬಸ ನಿಲ್ದಾಣದ ಹತ್ತಿರದ ಲಾಡ್‌್ಜವೊಂದರ ಮುಂಭಾಗ ಮೂವರು ದರೋಡೆಕೋರರನ್ನು ಆಟೋ ರಿಕ್ಷಾ ಸಮೇತ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣ ಸೇರಿದಂತೆ ಇತರೆ 4 ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಗಳಿಂದ 6 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ವಿಧಾನಸೌಧ, ಹನುಮಂತನಗರ, ಮಾಗಡಿ ರೋಡ್ ಪೊಲೀಸ್ ಠಾಣೆಯ ತಲಾ ಎರಡು ಮೊಬೈಲ್ ಸುಲಿಗೆ ಪ್ರಕರಣಗಳು ಸೇರಿದಂತೆ ಒಟ್ಟು 6 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ಇನ್‌ಸ್ಪೆಕ್ಟರ್ ವಿನೋದ್ ಭಟ್ ನೇತೃತ್ವದ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.