ಬೆಂಗಳೂರು, ಜು.23- ಯುವಕರ ಉದ್ಯೋಗಕ್ಕೆ ಉತ್ತೇಜನ, ಶಿಕ್ಷಣಕ್ಕೆ ಒತ್ತು, ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮತ್ತು ತೆರಿಗೆಯಲ್ಲಿ ದಂಡವನ್ನು ಹಿಂಪಡೆದಿರುವುದರಿಂದ ಕೇಂದ್ರ ಬಜೆಟ್ ಒಟ್ಟಾರೆ ಆಶಾದಾಯಕವಾಗಿದೆ ಎಂದು FKCCI ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ನೋಡಿದರೆ ಎನ್‍ಡಿಎ ಮಾದರಿ ಕಾಣುತ್ತದೆ. ಆದರೆ, ಕರ್ನಾಟಕಕ್ಕೆ ಅಷ್ಟಾಗಿ ಅನುದಾನ ಸಿಗದಿರುವುದು ಬೇಸರ ಮೂಡಿಸಿದೆ ಎಂದು ಹೇಳಿದರು. ವಿಶೇಷವಾಗಿ ಈ ಬಾರಿ ಎಂಎಸ್‍ಎಂಇಗಳಿಗೆ ಉತ್ತೇಜನ, ಕೃಷಿಗೆ ಒತ್ತು, ಮಹಿಳಾ ಉದ್ಯೋಗಿಗಳಿಗೆ ಹೊಸ ಅವಕಾಶಗಳು ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಆಯಾಮ ನೀಡಿರುವುದನ್ನು FKCCI ಸ್ವಾಗತಿಸುತ್ತದೆ ಎಂದರು.
ಮುದ್ರಾ ಯೋಜನೆ ಸಾಲವನ್ನು 20 ಲಕ್ಷಕ್ಕೆ ಏರಿಸಿರುವುದು, ಸೋಲಾರ್ ಪ್ಯಾನಲ್‍ಗಳ ಮೇಲಿನ ತೆರಿಗೆ ಇಳಿಕೆ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಮೇಲಿನ ಸಬ್ಸಿಡಿಯನ್ನು ಮುಂದುವರೆಸಿರುವುದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಿರಿಯ ಉಪಾಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಉಮಾರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ್ ಮತ್ತಿತರರಿದ್ದರು.