Wednesday, August 20, 2025
Homeರಾಜ್ಯಮಹಾಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

ಮಹಾಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ

Flood threat in North Karnataka due to heavy rains

ಬೆಂಗಳೂರು/ಬೆಳಗಾವಿ,ಆ.20– ಮಹಾಮಳೆಯ ಅಬ್ಬರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ, ಹಾವೇರಿ, ಧಾರವಾಡ, ಕಲಬುರಗಿ, ಗದಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಜಲಾಶಯಗಳು ಭರ್ತಿಯಾಗಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಹೊಲಗದ್ದೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಯ್ನಾ ಡ್ಯಾಂನಿಂದ 53 ಸಾವಿರ ಕ್ಯೂಸೆಕ್‌, ರಾಧಾನಗರಿ ಡ್ಯಾಂನಿಂದ 11 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಚಿಕ್ಕೋಡಿ ಉಪವಿಭಾಗದ 11ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. 51 ಟಿಎಂಸಿ ಸಾಮರ್ಥ್ಯದ ಹಿಡಕಲ್‌ ಜಲಾಶಯ ಭರ್ತಿಯಾಗಿ 47.800 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಗೋಕಾಕ್‌, ಮೂಡಲಗಿ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮುಳುಗಡೆಯ ಭೀತಿ ಎದುರಾಗಿದೆ.

ನಿರಂತರ ಸುರಿಯುತ್ತಿರುವ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಗೋಕಾಕ್‌ನಲ್ಲಿ ಮನೆ ಕುಸಿದು ಮಹಿಳೆ ಹಾಗೂ ಮುಧೋಳದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸೇರಿದಂತೆ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿದೆ.

ಬೆಳಗಾವಿಯಲ್ಲಿ ಭಾರೀ ಮಳೆಗೆ ಭತ್ತದ ಬೆಳೆ ಕೊಚ್ಚಿ ಹೋಗಿದೆ. ಎಳ್ಳೂರ, ಷಹಪುರ, ವಡಗಾವಿಯಲ್ಲಿ ನಾಲೆ ನೀರು ನುಗ್ಗಿ ನೂರಾರು ಎಕರೆಯಲ್ಲಿದ್ದ ಭತ್ತದ ಬೆಳೆ ಕಳೆದುಕೊಳ್ಳುವ ಆತಂಕ ರೈತರಲ್ಲಿ ಎದುರಾಗಿದೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಶೀತಳ್ಳಿ ಕ್ಷೇತ್ರ ಮುಳುಗಡೆಯಾಗಿದ್ದು, ಓಡಾಡಲು ಜನ ಪರದಾಡುವಂತಾಗಿದೆ.

ಕೊಪ್ಪಳದ ತುಂಗಭದ್ರಾ ಜಲಾಶಯದ 26 ಕ್ರಶ್‌ಗೇಟ್‌ಗಳ ಮೂಲಕ 1.20 ಲಕ್ಷ ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿದ್ದು, ಇದರಿಂದ ಆನೆಗುಂದಿ, ನವವೃಂದಾವನ ಸಂಪರ್ಕ ಕಡಿತಗೊಂಡಿದೆ. ಶ್ರೀ ಕೃಷ್ಣ ದೇವರಾಯ ಸಮಾಧಿ ಸಾಲು ಮಂಟಪ ಮುಳುಗಡೆ ಹಂತಕ್ಕೆ ತಲುಪಿದೆ. ಡ್ಯಾಂನ 6 ಗೇಟುಗಳು ಜಾಮ್‌ ಆಗಿದ್ದು, ಆತಂಕ ಸೃಷ್ಟಿಸಿದೆ.

ಯಾದಗಿರಿಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಕೃಷ್ಣಾ ನದಿಗೆ 1.60 ಸಾವಿರ ಕ್ಯೂಸೆಕ್‌ ನೀರು ಬಿಡಲಾಗಿದ್ದು, ನದಿಪಾತ್ರದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಯಾದಗಿರಿಯಲ್ಲಿ ಮಳೆಯ ಹೊಡೆತಕ್ಕೆ ನೂರಾರು ಎಕರೆ ಬೆಳೆ ನಾಶವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕಟಾವಿಗೆ ಬಂದಿದ್ದ ಹೆಸರು, ಉದ್ದಿನಬೇಳೆ ನೀರಿನಲ್ಲಿ ಮುಳುಗಿ ಕೊಳೆಯುವ ಹಂತ ತಲುಪಿದೆ. ಈರುಳ್ಳಿ ಬೆಳೆ ಹಾಳಾಗಿದೆ.

ಹಾವೇರಿಯಲ್ಲಿ ಕೂಡ ವರುಣನ ಆರ್ಭಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಹಾಸನ ಜಿಲ್ಲೆಯಲ್ಲೂ ಕೂಡ ವರ್ಷಧಾರೆ ಮುಂದುವರೆದಿದೆ. ಸಕಲೇಶಪುರದಲ್ಲಿ ಭೂಕುಸಿತ, ಗುಡ್ಡಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ಧಾರಕಾರ ಮಳೆಗೆ ಜನ ಹೈರಾಣಾಗಿದ್ದಾರೆ.

ಹೆಗ್ಗದ್ದೆ ಬಳಿ ಭಾರೀ ಪ್ರಮಾಣದ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ. ಸಕಲೇಶಪುರ ಪಟ್ಟಣದ ಹೊರವಲಯದ ಬೈಪಾಸ್‌‍ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಡ್ಡ ಕುಸಿತ ಉಂಟಾಗಿದೆ. ರಸ್ತೆಯ ಸುರಕ್ಷತೆಗಾಗಿ ನಿರ್ಮಿಸಿದ್ದ ತಡೆಗೋಡೆಗೂ ಹಾನಿಯಾಗಿದೆ.ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಗ್ರಾಮದಲ್ಲಿ ಮಳೆಗಾಳಿಗೆ ಶಾಲೆಯ ಗೋಡೆ ಹಾಗೂ ಹೆಂಚುಗಳು ಬಿದ್ದಿವೆ. ಶಾಲೆಗೆ ರಜೆ ಇದ್ದ ಕಾರಣ ಅನಾಹುತ ತಪ್ಪಿದೆ.

ಯಗಚಿ ಜಲಾಶಯ ಭರ್ತಿ ; ನಾಲೆಗಳಿಗೆ ನೀರು
ಮಲೆನಾಡು ಭಾಗದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೇಲೂರಿನ ಯಗಚಿ ಜಲಾಶಕ್ಕೆ ಒಳ ಹರಿವು ಹೆಚ್ಚಾಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನದಿ ಹಾಗೂ ಎಡದಂಡೆ ನಾಲೆ ಮೂಲಕ ನಿರಂತರವಾಗಿ ನೀರು ಬಿಡಲಾಗಿದೆ.

ಈ ಬಾರಿಯ ಉತ್ತಮ ಮಳೆಯಿಂದಾಗಿ ಪಟ್ಟಣ ಸಮೀಪದ ಯಗಚಿ ಜಲಾಶಯ ಭರ್ತಿಯಾಗಿದ್ದು, ಕಳೆದ ಒಂದು ತಿಂಗಳಿಂದ ಕ್ರಸ್ಟ್‌ಗೇಟ್‌ಗಳ ಮೂಲಕವೇ ನೀರು ಹರಿಯ ತೊಡಗಿದೆ. ಆದರೆ ಬಿಟ್ಟೂ ಬಿಟ್ಟು ಬರುತಿದ್ದ ಮಳೆ ಕಳೆದ ಕೆಲ ದಿನಗಳಿಂದ ಮಲೆನಾಡು ಬಾಗದಲ್ಲಿ ನಿರಂತರವಾಗಿ ಬಿಡುವಿಲ್ಲದೆ ಜೋರಾಗಿ ಸುರಿಯುತ್ತಿರುವ ಕಾರಣ ಆ ಭಾಗದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿದ್ದರಿಂದ ಜಲಾಶಯಕ್ಕೆ ದಿನದಿಂದ ದಿನಕ್ಕೆ ಹೆಚ್ಚಾಗಿ ನೀರಿನ ಅರಿವು ಬರುತ್ತಿರುವುದರಿಂದ ಯಗಚಿ ಜಲಾಶಯ ಭರ್ತಿಯಾಗಿದೆ.

1124 ಕ್ಯೂಸೆಕ್ಸ್ ನಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಜಲಾಶಯದಿಂದ ಯಗಚಿ ನದಿ ಮೂಲಕ 1000 ಕ್ಯೂಸೆಕ್‌, ಎಡದಂಡೆ ನಾಲೆ ಮೂಲಕ 100 ಕ್ಯೂಸೆಕ್‌ ನೀರನ್ನು ಬಿಡಲಾಗುತಿದೆ. ಆದ್ದರಿಂದ ನದಿ ಪಾತ್ರದ ಹಾಗೂ ನಾಲೆ ಅಕ್ಕಪಕ್ಕದ ಜನರು ಎಚ್ಚರಿಕೆ ವಹಿಸಬೇಕಿದೆ.

RELATED ARTICLES

Latest News