ಹುಬ್ಬಳ್ಳಿ, ಅ.1- ಮನುಷ್ಯರ ಶವ ಸಂಸ್ಕಾರದಂತೆಯೇ ಪ್ರಾಣಿಗಳ ಅಂತ್ಯಕ್ರಿಯೆ ನಡೆಸಲು ರಾಜ್ಯದಲ್ಲಿಯೇ ಪ್ರಥಮವಾಗಿ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಪ್ರಾಣಿಗಳ ಅಂತ್ಯಕ್ರಿಯಾ ಘಟಕಗಳನ್ನು ಸ್ಥಾಪಿಸಿದೆ. ಪ್ರಾಯೋಗಿಕ ಹಂತ ಮಾತ್ರ ಬಾಕಿ ಉಳಿದುಕೊಂಡಿದೆ.
ಇನುಂದೆ ಸತ್ತ ಪ್ರಾಣಿಗಳ ದಹನವೂ (ಸುಡುವುದು) ಆಗಲಿದೆ. ಇದಕ್ಕಾಗಿ ಹು-ಧಾ ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಎರಡು ಘಟಕಗಳ ಕಾಮಗಾರಿ ಮುಗಿಸಿದೆ. ಒಟ್ಟು 1.6 ಕೋಟಿ ರೂ. ಖರ್ಚಾಗಿದೆ. 15 ನೇ ಹಣಕಾಸು ಆಯೋಗದಡಿ ಅನುದಾನವನ್ನು ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಧಾರವಾಡ ಹೊಸಯಲ್ಲಾಪುರ ಬಳಿಯ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಪ್ರಾಣಿಗಳ ದಹನ ಘಟಕ ತೆರೆಯಲಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಾಕು ಪ್ರಾಣಿಗಳನ್ನು ಹೂಳಲು ಅಥವಾ ಸುಡಲು ನಿಗದಿತ ಸ್ಥಳ ಇರಲಿಲ್ಲ. ಮೃತ ಪ್ರಾಣಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತದ್ದರು. ಇದರಿಂದ ಕೊಳತೆ ವಾಸಾನೆಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದರು. ಸಾಕುಪ್ರಾಣಿ ಮಾಲೀಕರಿಗೆ ಎರಡು ಆಯ್ಕೆಗಳಿದ್ದವು. ತಮ್ಮ ಸಾಕು ಪ್ರಾಣಿಗಳನ್ನು ತಮ ಹಿತ್ತಲಿನಲ್ಲಿ ಹೂತು ಹಾಕುವುದು ಅಥವಾ ಪಾಲಿಕೆ ವಾಹನಗಳಿಗೆ ಹಸ್ತಾಂತರ ಮಾಡುತ್ತಿದ್ದರು. ಅದರೀಗ, ಸಾಕಷ್ಟು ಜನರು ಮಹಾನಗರ ಪಾಲಿಕೆ ನಿಯಂತ್ರಣಾ ಕೊಠಡಿಗೆ ಕರೆ ಮಾಡುತ್ತಿದ್ದು, ಸಾಕು ಪ್ರಾಣಿಗಳ ಸಶಾನ ಘಟಕ ಸ್ಥಾಪಿಸಲು ಒತ್ತಾಯ ಕೇಳಿಬಂದಿದ್ದವು.
ದೂರುಗಳ ಆಧಾರದ ಮೇಲೆ ಕ್ಯಾಟ್ ವ್ಹೇಹಿಕಲ್ ಗಳು ಸತ್ತ ಪ್ರಾಣಿಗಳನ್ನು ತ್ಯಾಜ್ಯ ಘಟಕಗಳಲ್ಲಿ ಅಂತ್ಯಕ್ರಿಯೇ ನಡೆಸಲಾಗುತ್ತಿತ್ತು. ಅದು ವೈಜ್ಞಾನಿಕವಾಗಿರಲಿಲ್ಲ. ಮಹಾನಗರ ಪಾಲಿಕೆ ವೈಜ್ಞಾನಿಕವಾಗಿ ಪ್ರಾಣಿಗಳನ್ನು ಅಂತ್ಯಕ್ರಿಯೆ ಮಾಡುವದರ ಜೊತೆಗೆ ಪ್ರಾಣಿಗಳಿಗೂ ಕೂಡ ಮನುಷ್ಯನಂತೆ ಎಂಬ ಭಾವನೆಯಿಂದ ಪ್ರಾಣಿಗಳ ದಹನ ಘಟಕ ಸ್ಥಾಪಿಸುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕಾರ್ಯ ನಿರ್ವಾಹ ಇಂಜಿನಿಯರ್ ಆರ್.ವಿಜಯಕುಮಾರ್ , ಪ್ರಾಣಿಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಉದ್ದೇಶದಿಂದ ಎರಡು ಘಟಕ ಸ್ಥಾಪನೆ ಮಾಡಲಾಗಿದೆ. ಪ್ರಾಣಿಗಳು ಸತ್ತ ಕೂಡಲೇ ಹುಬ್ಬಳ್ಳಿ-ಧಾರವಾಡ ಸಹಾಯವಾಣಿಗೆ ಕರೆ ಮಾಡಿದರೆ ಪಾಲಿಕೆ ಸಿಬ್ಬಂದಿ ಸತ್ತ ಪ್ರಾಣಿಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡುತ್ತಾರೆ. ಸಾರ್ವಜನಿಕರು ಕೂಡ ತಾವೇ ಬಂದು ಅಂತ್ಯಕ್ರಿಯೆ ಮಾಡಬಹುದು ಎಂದು ಹೇಳಿದರು.
ಒಂದು ತಾಸಿಗೆ 80-100 ಕೆಜಿ ತೂಕದ ಪ್ರಾಣಿಗಳನ್ನು ಇದರಲ್ಲಿ ದಹನ ಮಾಡಬಹುದು. ದಹನ ಯಂತ್ರಕ್ಕೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಗಿದೆ. ಇನ್ನಷ್ಟು ತಾಂತ್ರಿಕ ಕಾಮಗಾರಿಗಳು ಬಾಕಿ ಉಳಿದಿವೆ. ಸದ್ಯಕ್ಕೆ ಸ್ಪಾರ್ಕ್ ಹಾಗೂ ಕೆಲ ಸಾಮಾಗ್ರಿಗಳ ಜೋಡಣೆ ಉಳಿದುಕೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. 30 ಮೀಟರ್ ಎತ್ತರದ ಚಿಮಣಿ ನಿರ್ಮಿಸಿದ್ದು, ಯಾವುದೇ ಮಾಲಿನ್ಯ ಉಂಟಾಗದಂತೆ ತಡೆಯಲಿದೆ ಎಂದರು.
ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ಪ್ರತಿ ತಿಂಗಳ 250-300 ದೂರುಗಳು ಸಹಾಯವಾಣಿಗೆ ಬರುತ್ತಿವೆ. ಸಣ್ಣ ಹೆಗ್ಗಣದಿಂದ ಹಿಡಿದು ದನಕರುಗಳವರೆಗೆ ದೂರುಗಳು ಬರುತ್ತವೆ. ಯಥಪ್ರಕಾರ ದೂರುಗಳ ಆಧಾರದ ಮೇಲೆ ಸತ್ತ ಪ್ರಾಣಿಗಳನ್ನು ವಾಹನಗಳ ಮೂಲಕ ಸಾಗಿಸಿ ತ್ಯಾಜ್ಯ ಘಟಕಗಳಲ್ಲಿ ಹೂಳಲಾಗುತ್ತಿತ್ತು. ಈಗ ಎರಡು ಘಟಕಗಳು ಸಿದ್ದವಾಗಿದ್ದು ಕಾರ್ಯಾಚರಣೆ ಹಂತಕ್ಕೆ ಬಂದಿದ್ದು ವೈಜ್ಞಾನಿಕವಾಗಿ ಅಂತ್ಯಕ್ರಿಯೆ ಮಾಡಲಾಗುವದು. ಸ್ಪಾರ್ಕ್ ಮತ್ತು ಪುಣೆಯಿಂದ ಬರುವ ಕೆಲ ಉಪಕರಣಗಳ ಜೋಡಣೆ ಮಾತ್ರ ಬಾಕಿ ಇದೆ.
ಇನ್ನೂ ಕೆಲವೇ ದಿನಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಅದಾದ ನಂತರ ಗ್ಯಾಸ್ ಸಂಪರ್ಕ ಕಲ್ಪಿಸಿ 15-20 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸದ್ಯಕ್ಕೆ ವಾಣಿಜ್ಯ ಬಳಕೆ ಗ್ಯಾಸ ಬಳಕೆ ಮಾಡಲಾಗುತ್ತಿದೆ. ನಂತರ ಅದಾನಿ ಕಂಪನಿಯ ವಾಣಿಜ್ಯ ಬಳಕೆ ಗ್ಯಾಸ್ ಸಂಪರ್ಕ ಪಡೆದು ಕಾರ್ಯಾರಂಭ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಸತ್ತ ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಘಟಕಗಳು ಇಲ್ಲ. ರಾಜ್ಯದಲ್ಲಿ ಇದೇ ಪ್ರಥಮ ಎಂದು ಮಾಹಿತಿ ನೀಡಿದರು.
ಒಂದು ವರ್ಷದಲ್ಲಿ 1,336 ದೂರು ಸ್ವೀಕಾರ:
ಮಹಾನಗರ ಪಾಲಿಕೆ ನಿಯಂತ್ರಣಾ ಕೊಠಡಿಗೆ ಸತ್ತ ಪ್ರಾಣಿಗಳ ಬಗ್ಗೆ ಪ್ರತಿ ದಿನ 3 ರಿಂದ 4 ದೂರು ಬರುತ್ತವೆ. ಕಳೆದ ಒಂದು ವರ್ಷದಲ್ಲಿ ಸತ್ತ 6. ಪ್ರಾಣಿಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಿಂದ 936, ಧಾರವಾಡದಿಂದ 430 ಸೇರಿ ಒಟ್ಟು 1,336 ದೂರುಗಳನ್ನು ಸ್ವೀಕರಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆ ನಿರ್ದೇಶನ:
ಸಾಕು ಪ್ರಾಣಿಗಳಿಗೆ ಸಶಾನ ಇಲ್ಲದಿರುವ ಕುರಿತು ಜನರು, ಪ್ರಾಣಿ ಕಲ್ಯಾಣ ಮಂಡಳಿಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ 2021ರಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಅವಳಿನಗರದಲ್ಲಿ ಪ್ರಾಣಿಗಳ ಚಿತಾಗಾರ ಸ್ಥಾಪಿಸುವುದರ ಅಗತ್ಯತೆಯನ್ನು ವಿವರಿಸಿದ್ದರು. ಇದರ ಆಧಾರದ ಮೇಲೆಯೇ ಪ್ರಾಣಿಗಳಿಗೆ ಸಶಾನ ಸ್ಥಾಪಿಸಲು ನಗರಾಭಿವೃದ್ಧಿ ಇಲಾಖೆಯು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು.
- ಕಲ್ಮೇಶ ಮಂಡ್ಯಾಳ