ಬೆಂಗಳೂರು, ನ.6- ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರೂ ಸಹ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ನಿರಂತರವಾಗಿ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಲೇ ಇದೆ. ಕರ್ನಾಟಕ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡಲು ಬೆಂಗಳೂರು ನಗರ ಪೊಲೀಸರು ಸೇರಿದಂತೆ ರಾಜ್ಯ ಪೊಲೀಸರು ಪಣ ತೊಟ್ಟಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಮಾದಕ ವಸ್ತು ನಿಗ್ರಹ ಪಡೆಯನ್ನು ಸಹ ಸರ್ಕಾರ ರಚಿಸಿ ದಂಧೆಕೋರರ ವಿರುದ್ಧ
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ವಿವಿಧ ಮಾದರಿಯ ಮಾದಕ ವಸ್ತುಗಳು ಬೆಂಗಳೂರು ನಗರಕ್ಕೆ ನೆರೆಯ ರಾಜ್ಯಗಳಲ್ಲದೆ ವಿದೇಶಗಳಿಂದಲೂ ಬರುತ್ತಿವೆ. ಇವುಗಳ ಸಾಗಾಟ ಮತ್ತು ಮಾರಾಟ ಬಹಳ ಗೌಪ್ಯವಾಗಿರುತ್ತದೆ.
ಬೆಂಗಳೂರು ನಗರ ಪೊಲೀಸರು ಈ ವರ್ಷದ ಜನವರಿಯಿಂದ ಅಕ್ಟೋಬರ್ ಮೊದಲನೆ ವಾರದವರೆಗೂ 711 ಪ್ರಕರಣಗಳಲ್ಲಿ ಒಟ್ಟು 1048 ಮಂದಿ ಆರೋಪಿಗಳನ್ನು ಬಂಧಿಸಿ 81.21 ಕೋಟಿ ರೂ. ಬೆಲೆಯ 1486.58 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಲ್ಲಿ 35 ಮಂದಿ ವಿದೇಶಿಯರು ಸೇರಿದ್ದಾರೆ. ಇವರುಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ವಿದ್ಯಾಭ್ಯಾಸ, ಪ್ರವಾಸ, ವೈದ್ಯಕೀಯ ಹೀಗೆ ಮುಂತಾದ ವೀಸಾಗಳ ಮೇಲೆ ಬೆಂಗಳೂರು ನಗರಕ್ಕೆ ಬಂದ ಕೆಲವು ವಿದೇಶಿಗರು ವೀಸಾ ಅವಧಿ ಮುಗಿದಿದ್ದರೂ ಸಹ ತಮ ತಮ ದೇಶಗಳಿಗೆ ತೆರಳದೆ ಇಲ್ಲಿ ಉಳಿದುಕೊಳ್ಳುತ್ತಾರೆ. ಈ ರೀತಿ ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಕೆಲವು ವಿದೇಶಿಗರು ಮಾದಕ ವಸ್ತು ಸಾಗಾಟ ಮತ್ತು ಮಾರಾಟ ದಂಧೆಯಲ್ಲಿ ತೊಡಗಿಕೊಂಡು ಸುಲಭವಾಗಿ ಹಣ ಸಂಪಾದಿಸಿ ವಿಲಾಸಿ ಜೀವನ ನಡೆಸುತ್ತಿದ್ದಾರೆ.
ಇಂತಹ ಬಹುತೇಕ ಆರೋಪಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಬಾಡಿಗೆ ಮನೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಮಾಹಿತಿ ಸಂಗ್ರಹಿಸಿ ಆಗಾಗ್ಗೆ ಇಂತಹವರುಗಳ ಮನೆಗಳ ಮೇಲೆ ದಾಳಿ ಮಾಡಿ ಬಂಧಿಸುತ್ತಿದ್ದಾರೆ. ಪಾಸ್ಪೋರ್ಟ್, ವೀಸಾ ಹಾಗೂ ಇನ್ನಿತರ ದಾಖಲೆಗಳ ಪರಿಶೀಲನೆ, ವೀಸಾ ಅವಧಿ ಮುಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೂ ಸಹ ವಿದೇಶಿ ಡ್ರಗ್್ಸ ದಂಧೆಕೋರರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ನಗರ ಮತ್ತು ರಾಜ್ಯಕ್ಕೆ ಬರುವ ಎಲ್ಲಾ ಪಾರ್ಸಲ್ಗಳ ಮೇಲೂ ಸಹ ಬೆಂಗಳೂರು ನಗರ ಪೊಲೀಸರು ನಿಗಾ ವಹಿಸುತ್ತಿದ್ದಾರೆ.
ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲೂ ಸಹ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ವಿದೇಶಗಳಿಂದ ನಗರಕ್ಕೆ ಮಾದಕ ವಸ್ತುಗಳು ಬರುತ್ತಿರುವುದು ನಿಂತಿಲ್ಲ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೇಂದ್ರ ಗೃಹ ಮತ್ತು ವಿದೇಶಾಂಗ ಖಾತೆ ಸಚಿವರುಗಳನ್ನು ಭೇಟಿ ಮಾಡಿ ವಿದೇಶಗಳಿಂದ ಭಾರತ ದೇಶಕ್ಕೆ ನಿರಂತರವಾಗಿ ಬರುತ್ತಿರುವ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಮನವಿ ಮಾಡಿ ಒತ್ತಾಯಿಸಬೇಕು.
ವೀಸಾ ಅವಧಿ ಮುಗಿದು ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ವಿದೇಶಿಗರನ್ನು ಎಫ್ಆರ್ಆರ್ಒ ಅಧಿಕಾರಿಗಳು ಜತೆ ಸೇರಿ ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿ ಹೊರಹಾಕದಿದ್ದರೆ ರಾಜಧಾನಿ ಬೆಂಗಳೂರು ಮಾದಕ ವಸ್ತು ರಾಜಧಾನಿಯಾಗುತ್ತದೆ. ಎಚ್ಚರ..! ಎಚ್ಚರ..!
