ಬೆಂಗಳೂರು,ಅ.14– ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ ಬಂದು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯಾ ದೇಶದ ಮಹಿಳೆ ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿ 2.15 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಮಹಾಲಕ್ಷ್ಮೀ ಲೇಔಟ್‌ನ ಖಾಲಿ ಜಾಗದಲ್ಲಿ ವಿದೇಶಿ ಪ್ರಜೆಯೊಬ್ಬ ಬೈಕ್‌ನಲ್ಲಿ ಬಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ 2011ರಲ್ಲಿ ಮೆಡಿಕಲ್ ವೀಸಾದಲ್ಲಿ ನೈಜೀರಿಯಾದಿಂದ ಬೆಂಗಳೂರಿಗೆ ಬಂದು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಾಗಿ ಹೇಳಿದ್ದಾನೆ.
ಈ ಕೃತ್ಯದಲ್ಲಿ ಮತ್ತೊಬ್ಬ ವಿದೇಶಿ ವ್ಯಕ್ತಿ ಸೇರಿದಂತೆ ಮಹಿಳೆಯೂ ಸಹಕರಿಸುವುದಾಗಿ ಆರೋಪಿ ತಿಳಿಸಿದ್ದು, ಆತನಿಂದ 2.15 ಕೋಟಿ ರೂ. ಮೌಲ್ಯದ 490ಗ್ರಾಂ ಎಂಡಿಎಂಎ ಕ್ರಿಸ್ಟಲ್, 43 ಗ್ರಾಂ ಕೊಕೇನ್,1 ತೂಕದ ಯಂತ್ರ, ಮೊಬೈಲ್ ಪೋನ್ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳನ್ನು ಟಾರ್ಗೆಟ್ ಮಾಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾನೆ.ಆರೋಪಿ ನೀಡಿದ ಮಾಹಿತಿಯಂತೆ ತನಿಖೆ ಮುಂದುವರೆಸಿದ ಪೊಲೀಸರು ಈತನಿಗೆ ಸಹಕರಿಸಿದ ವಿದೇಶಿ ಮಹಿಳೆಯನ್ನು ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಟೆಕ್ ಸಿಟಿ ಲೇಔಟ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ತನಿಖೆ ಮುಂದುವರೆಸಿದ ಪೊಲೀಸರು ತಲೆ ಮರೆಸಿಕೊಂಡಿರುವ ಮತ್ತೊಬ್ಬ ವಿದೇಶಿ ಪ್ರಜೆಗಾಗಿ ಪತ್ತೆ ಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.ಈ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್‌್ಸಪೆಕ್ಟರ್ ನವೀನ್ ಹಾಗೂ ಇತರೆ ಸಿಬ್ಬಂದಿ ತಂಡ ಕೈಗೊಂಡಿತ್ತು.ಆರೋಪಿಗಳು ನಕಲಿ ಪಾಸ್‌ಪೋರ್ಟ್ ಹೊಂದಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.