ಬೆಂಗಳೂರು,ಮೇ 5-ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಂಗಳೂರಿನ ಬಜಪೆ ಠಾಣೆ ಪೊಲೀಸರು ಈಗಾಗಲೇ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದು, ಬಂಧಿತರಾಗಿರುವ 8 ಮಂದಿ ಆರೋಪಿಗಳ ವಿವಿಧ ಬ್ಯಾಂಕ್‌ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ಹಿನೆ್ನಲೆಯಲ್ಲಿ ಹಣ ಸಹಾಯ ಮಾಡಿರುವ ಅನುಮಾನವು ವ್ಯಕ್ತವಾಗಿವೆ.ಕೊಲೆಯಾಗಿರುವ ಾಝಿಲ್ ಸಹೋದರ ಆದಿಲ್ ಆರೋಪಿಗಳಿಗೆ 5 ಲಕ್ಷ ರೂ. ಹಣ ಸುಪಾರಿ ಕೊಟ್ಟಿರುವುದಲ್ಲದೇ ವಿವಿಧ ಮೂಲಗಳಿಂದ ಆರೋಪಿಗಳಿಗೆ ಹಣ ಬಂದಿರುವ ಶಂಕೆ ವ್ಯಕ್ತವಾಗಿದೆ.
ಸುಹಾಸ್‌ಶೆಟ್ಟಿಯನ್ನು ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಲು ಯಾವ ರೀತಿ ವ್ಯವಸ್ಥೆ ಮಾಡಬೇಕು,ಪೊಲೀಸರು ಬಂಧಿಸಿದ ನಂತರ ಜಾಮೀನು ಹೇಗೆ ಕೊಡಿಸಬೇಕು ಎಂಬ ಬಗ್ಗೆ ಎಲ್ಲವೂ ಮೊದಲೇ ನಿರ್ಧಾರವಾಗಿತ್ತು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಮೂರು ತಿಂಗಳ ಹಿಂದೆಯೇ ಸ್ಕೆಚ್: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಆರೋಪಿಗಳು ಮೂರು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದರು ಎಂಬುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಕಳೆದ ಜನವರಿಯಲ್ಲಿ ಸ್ಪಾನ್ ತಂಡಕ್ಕೆ ಆದಿಲ್ ಮೂರು ಲಕ್ಷ ಹಣ ಕೊಟ್ಟಿದ್ದನು.ಹಾಗಾಗಿ ಆ ಹಣದಿಂದ ಒಂದು ಪಿಕಪ್ ವಾಹನ ಮತ್ತು ಶಿಫ್ಟ್ ಕಾರನ್ನು ಬಾಡಿಗೆಗೆ ಹಂತಕರು ಪಡೆದುಕೊಂಡು ಆ ವಾಹನಗಳಿಂದಲೇ ಸುಹಾಸ್‌ಶೆಟ್ಟಿ ಕೊಲೆ ಮಾಡಲು ಸಂಚು ರೂಪಿಸಿದ್ದ ಬಗ್ಗೆ ವಿವರಗಳು ಲಭ್ಯವಾಗಿವೆ.
ಚಲನವಲನಗಳ ಮೇಲೆ ನಿಗಾ: ಸುಹಾಸ್‌ಶೆಟ್ಟಿಯ ಚಲನವಲನಗಳ ಮೇಲೆ ನಿಗಾ ಇಡಲು ಹಂತಕರು ಚಿಕ್ಕಮಗಳೂರಿನ ಇಬ್ಬರು ಹಿಂದು ಯುವಕರನ್ನು ನೇಮಿಸಿ ಅವರಿಂದ ಸುಹಾಸ್‌ಶೆಟ್ಟಿ ಯಾವ ಸಮಯದಲ್ಲಿ ಮನೆಯಿಂದ ಹೊರಗೆ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು.
ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತೆ ಈ ಇಬ್ಬರು ಯುವಕರು ನಿಗಾವಹಿಸಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.
ಒಟ್ಟಾರೆ ಸುಹಾಸ್ ಶೆಟ್ಟಿ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಹಂತಕರು ನಡು ರಸ್ತೆಯಲ್ಲೇ ವಾಹನದಿಂದ ಆತನ ಕಾರನ್ನು ಗುದ್ದಿಸಿ ತಲ್ವಾರ್‌ಗಳಿಂದ ಮನ ಬಂದಂತೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.ಆದಿಲ್ ಕೊಟ್ಟ ಹಣದಲ್ಲಿ ಆರೋಪಿಗಳು ಪಾರ್ಟಿ ಮಾಡಿದ್ದಾರೆ ಎಂಬುವುದು ಸಹ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಈ ಪ್ರಕರಣದಲ್ಲಿ ಈಗಾಗಲೇ ಮಂಗಳೂರು ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ವಿಶೇಷ ತಂಡಗಳು ಶೋಧ ಮುಂದುವರೆಸಿದೆ.