ಬೆಂಗಳೂರು,ಆ.29- ಭಾರೀ ವಿವಾದ ಸೃಷ್ಟಿಸಿದ್ದ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಅರಣ್ಯ ಇಲಾಖೆಯು, ಬೆಂಗಳೂರುನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಕಳೆದ ಆ.22ರಂದು ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ರವೀಂದ್ರಕುಮಾರ್ ಅವರು, ಬೆಂಗಳೂರುನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದು, ನಿಯಮ ಉಲ್ಲಂಘನೆ ಮಾಡಿರುವ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನಿರ್ದೇಶನ ಮಾಡಿದ್ದಾರೆ.
ನಟ ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್‌ಗೆ ನೀಡಾಗಿತ್ತು. ನಂತರ ಭೋಗ್ಯದ ಅವಧಿ ವಿಸ್ತರಣೆ ಮಾಡಿಕೊಳ್ಳಲಾಗಿತ್ತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಅವರ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಕೇಳಿದ್ದರು ಎನ್ನಲಾಗಿದೆ.
ಜಿಲ್ಲಾಧಿಕಾರಿಗಳ ವಿಶೇಷ ಅಧಿಕಾರ ಬಳಸಿ ಇದ್ದನ್ನು ಮಾರಲಾಗಿದೆ. ಮಾರಾಟದಿಂದ ಬಂದ ಹಣವನ್ನು ಸ್ಟುಡಿಯೋ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ತಿಳಿಸಿದ್ದರೆಂದು ತಿಳಿದುಬಂದಿದೆ.
ಆದರೆ ಈವರೆಗೆ ಸ್ಟುಡಿಯೋ ಯಥಾಸ್ಥಿತಿಯಲ್ಲೇ ಇದೆ. ಇದರ ಅಭಿವೃದ್ಧಿಯಾಗಿಲ್ಲ. ಈಗ ಬಾಲಕೃಷ್ಣ ಮೊಮಗ ಕಾರ್ತಿಕ್ ಈ ಜಮೀನನ್ನು ಮಾರಲು ಪ್ಲ್ಯಾನ್ ಮಾಡಿದ್ದರು. 1 ಎಕರೆಗೆ 14 ಕೋಟಿ ರೂಪಾಯಿಯಂತೆ ಮಾರಲು ಪ್ಲ್ಯಾನ್ ನಡೆದಿತ್ತು. ಈ ವಿಚಾರ ಅರಣ್ಯಾಧಿಕಾರಿಗೆ ಗೊತ್ತಾಗಿದೆ. ಹೀಗಾಗಿ, ಇದನ್ನು ವಶಕ್ಕೆ ಪಡೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.ಇದೇ ಆಗಸ್ಟ್ 7ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆಯಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದುಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ.
ಪತ್ರದಲ್ಲಿ ಏನಿದೆ?
ಸರ್ಕಾರಿ ಆದೇಶದ ಅನ್ವಯ ಏಪ್ರಿಲ್ 09, 1969 ರಂದು 20 ಎಕರೆ ಪ್ರದೇಶವನ್ನು ಟಿ.ಎನ್.ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು.
ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.
ವಿವಾದವೇನು?
2009ರ ಡಿ.30ರಂದು ವಿಷ್ಣುವರ್ಧನ್ ನಿಧನರಾಗಿದ್ದರು. ಬಳಿಕ ಅಭಿಮಾನ್ ಸ್ಟುಡಿಯೊದಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆಗ ಅದು ವಿವಾದಿತ ಜಾಗವೆಂಬ ಬಗ್ಗೆ ಯಾರೂ ಆಲೋಚಿಸಿರಲಿಲ್ಲ. ಬಳಿಕ ಆ ಜಾಗದಲ್ಲೇ ಸಾರಕ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಅಂತ್ಯಸಂಸ್ಕಾರದ ಸ್ಥಳದಲ್ಲೇ ಸಾರಕ ಮಾಡಬೇಕೆಂದು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಒತ್ತಾಯಿಸಿದ್ದರು ಇದಕ್ಕೆ ಮಣಿದ ರಾಜ್ಯ ಸರಕಾರ 2010-11ರ ಬಜೆಟ್‌ನಲ್ಲಿ 11 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ, ಅಭಿಮಾನ್ ಸ್ಟುಡಿಯೊದ ವಿವಾದಿತ ಜಾಗದಲ್ಲಿ ವಿಷ್ಣು ಸಾರಕ ನಿರ್ಮಾಣಕ್ಕೆ ಹಿರಿಯ ನಟ ಬಾಲಕೃಷ್ಣ ಕುಟುಂಬವು ವಿರೋಧ ವ್ಯಕ್ತಪಡಿಸಿತ್ತು.
ಸರಕಾರ, ಸ್ಟುಡಿಯೊ ಕಾರ್ಯನಿರ್ವಹಣೆ ಸಂಬಂಧ ತನಿಖೆ ನಡೆಸಿತ್ತು. ತನಿಖಾ ತಂಡವು ಸ್ಟುಡಿಯೊದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಸರಕಾರವು ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ದಾಖಲೆಗಳು ಹಾಗೂ ದೃಢೀಕರಣ ಪತ್ರವನ್ನು ಮಾಡಿಸಿಕೊಳ್ಳಲಿಲ್ಲ. ನಂತರ ಬಾಲಕೃಷ್ಣರ ಮಕ್ಕಳು, ಸರಕಾರದ ಮುಟ್ಟುಗೋಲು ಆದೇಶದ ವಿರುದ್ಧ 2015ರಲ್ಲಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು.
ಸರಕಾರ ಸಾರಕಕ್ಕೆ ಪಕ್ಕದಲ್ಲೇ ಮತ್ತೊಂದು ಜಾಗ ಗುರುತಿಸಿತು. ಸಾರಕ ನಿರ್ಮಾಣಕ್ಕೆ ಭೂಮಿ ಪೂಜೆಯೂ ನಡೆದಿತ್ತು.ಆದರೆ ಅದು ಅರಣ್ಯಪ್ರದೇಶವೆಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಅಭಿಮಾನಿಗಳು ಬಾಲಕೃಷ್ಣರ ಕುಟುಂಬದ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ 2023ರಲ್ಲಿ ನ್ಯಾಯಾಲಯ, ಈ ಪ್ರಕರಣದಲ್ಲಿ ಅಭಿಮಾನಿಗಳಿಗೆ ಹಕ್ಕು ಇಲ್ಲಎಂದು ಹೇಳಿ ಬಾಲಕೃಷ್ಣರ ಕುಟುಂಬ ಸದಸ್ಯರು ಹೈಕೋರ್ಟ್ ಆದೇಶ ಪಡೆದು ಸಾರಕ ತೆರವುಗೊಳಿಸಿದ್ದರು.