ಬೆಳಗಾವಿ,ಡಿ.4- ರಾಜ್ಯದ ಅರಣ್ಯ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಕಳೆ ಬೆಳೆಗಳನ್ನು ಕೇಂದ್ರ ಸರ್ಕಾರದ ನೆರವು ಪಡೆದುಕೊಂಡು ನಿಯಂತ್ರಿಸಲು ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರಣ್ಯದಲ್ಲಿ ಕಳೆಗಳು ಇರುವುದು ನಿಜ. ಒಂದು ಎಕರೆ ಕಳೆ ತೆಗೆಯಲು 87 ಸಾವಿರ ರೂ. ವೆಚ್ಚವಾಗುತ್ತದೆ. ಪ್ರಸಕ್ತ ವರ್ಷ ನಮಗೆ ಕಳೆ ತೆಗೆಯಲು 8-10 ಕೋಟಿ ಅನುದಾನ ಬೇಕು. ಕೇಂದ್ರದ ನೆರವು ಪಡೆದುಕೊಂಡು ಕಳೆಯನ್ನು ನಿಯಂತ್ರಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಪ್ರಶ್ನೆ ಕೇಳಿದ ತೇಜಸ್ವಿನಿಗೌಡ, ಅತಿ ಹೆಚ್ಚು ಆನೆ ಕರ್ನಾಟಕದಲ್ಲಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಆನೆಗಳು ಹೆಚ್ಚಾಗಿವೆ. ಅರಣ್ಯದಲ್ಲಿ ಕಳೆ ಬೆಳೆಗಳು ಹೆಚ್ಚಾಗುತ್ತಿದೆ. ಪ್ರಾಣಿಗಳ ಅಹಾರ, ಸಂಚಾರಕ್ಕೆ ಕಷ್ಟವಾಗುತ್ತಿದೆ.
ರಾಜ್ಯದ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ : ಸಚಿವ ಖರ್ಗೆ
ಬಂಡಿಪುರದಲ್ಲಿ 87 ಸಾವಿರ ಹೆಕ್ಟರ್ ಕಳೆ ಆವರಿಸಿದೆ. ನಾಗರಹೊಳೆಯಲ್ಲಿ ಅರಣ್ಯದಲ್ಲಿ 25% ಕಳೆಗಳು ಇದೆ ಎಂಬ ಮಾಹಿತಿಯನ್ನು ನೀಡಿದರು. ಇದರ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಾಗರಹೊಳೆ, ಬಂಡೀಪುರ, ಬನ್ನೇರುಘಟ್ಟ ಉದ್ಯಾನಗಳಲ್ಲಿ ದಟ್ಟವಾದ ಕಳೆಗಿಡಗಳು ಆವರಿಸಿವೆ. ದಟ್ಟವಾದ ಕಳೆಗಿಡಗಳಿಂದ ಆನೆಗಳು ಸೇರಿ ವನ್ಯಜೀವಿಗಳಿಗೆ ಆಹಾರ ಲಭ್ಯವಾಗುತ್ತಿಲ್ಲ. ವನ್ಯಪ್ರಾಣಿಗಳ ಮೇವಿಗೂ ಇದರಿಂದ ಕೊರತೆ ಉಂಟಾಗುತ್ತಿದೆ.
ಶೇ. 40-50ರಷ್ಟು ಕಳೆ ಗಿಡಗಳು ಬಂಡೀಪುರದಲ್ಲಿ ಆವರಿಸಿದೆ. ನಾಗರಹೊಳೆಯಲ್ಲಿ ಶೇ.30-40ರಷ್ಟು, ಬನ್ನೇರುಘಟ್ಟದಲ್ಲಿ ಶೇ.20-25ರಷ್ಟು ಕಳೆ ಗಿಡಗಳಿವೆ ಹಬ್ಬಿವೆ ಎಂದು ತೇಜಸ್ವಿನಿ ಗೌಡ ಸಚಿವರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಖಂಡ್ರೆ, ಎಲ್ಲ ಉದ್ಯಾನಗಳಲ್ಲಿ ಕಳೆಗಿಡದ ಸಮಸ್ಯೆ ಗಂಭೀರವಾಗಿ ಇದೆ. ಲಾಂಟಾನಾ, ಮೈಕೇನಿಯಾ ಮೀಕರಾಂಥ, ಸೆನ್ನ ಸ್ಪೆಕ್ಟಾಬಿಲಿಸ್ ಕಳೆಗಿಡಗಳು ಆವರಿಸಿವೆ. ಕಳೆ ತೆಗೆಯುವುದಕ್ಕೆ 1 ಹೆಕ್ಟೇರ್‍ಗೆ ಮೂರು ವರ್ಷಕ್ಕೆ 87000 ರೂ. ಅನುದಾನ ಬೇಕಾಗುತ್ತದೆ. 1200 ಕೋಟಿ ರೂ. ಒಟ್ಟಾರೆ ಅನುದಾನ ಬೇಕಾಗುತ್ತದೆ.
ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೂಡ ಕೇಂದ್ರದಿಂದ ಅನುದಾನ ಲಭ್ಯವಿಲ್ಲ. ಮುಂದೆ ವನ್ಯಜೀವಿಗಳಿಗೆ ಆಹಾರ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಆನೆ ಹಾವಳಿ ತಡೆದು ಆನೆ ಹಿಡಿಯುವುದಕ್ಕೆ 15 ಲಕ್ಷ ಖರ್ಚಾಗುತ್ತದೆ. ಬುಡಕಟ್ಟು ಜನರು ಕಳೆ ತೆಗೆಯುವುದರಲ್ಲಿ ನಿಪುಣರಾಗಿರುತ್ತಾರೆ. ಅವರನ್ನೂ ಬಳಸಿಕೊಂಡು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತೇಜಸ್ವೀನಿ ಗೌಡ ಸಲಹೆ ಮಾಡಿದರು.