ಕೊಚ್ಚಿ, ಅ.1- ಕೇರಳದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಜಾಕೋಬ್ ಥಾಮಸ್ ಅವರು ಪೂರ್ಣಾವಧಿ ಪ್ರಚಾರಕರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಕ್ರೈಸ್ತ ಸಮುದಾಯದ ಮೇಲೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಆಕ್ರಮಣಕಾರಿಯಾಗಿ ಪ್ರಭಾವ ಬೀರುತ್ತಿರುವ ಸನ್ನಿವೇಶದಲ್ಲಿ ಜಾಕೋಬ್ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಇಂದು ಎರ್ನಾಕುಲಂ ಜಿಲ್ಲೆಯ ಪಳ್ಳಕ್ಕರದಲ್ಲಿ ಗಣವೇಷ ಎಂದು ಹೆಸರಾದ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಪಾಲ್ಗೊಳ್ಳುವುದಾಗಿ ಟಿಎನ್‌ಐಇ ಜೊತೆಗೆ ನಡೆಸಿದ ಸಂವಾದದ ವೇಳೆ ಜಾಕೋಬ್ ತಿಳಿಸಿದ್ದಾರೆ.
ನಾನು ದಶಕಗಳಿಂದ ಸರಸಂಘ ಚಾಲಕ ಮೋಹನ್ ಭಾಗವತ್ ಸೇರಿದಂತೆ ಆರ್‌ಎಸ್‌ಎಸ್‌ನ ಉನ್ನತ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಆರ್‌ಎಸ್‌ಎಸ್‌ನ ಶಿಸ್ತು ಮತ್ತು ಅದರ ಕಾರ್ಯಕರ್ತರು ದೇಶಕ್ಕೆ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ನನ್ನನ್ನು ಈ ಸಂಘಟನೆಯತ್ತ ಆಕರ್ಷಿಸಿವೆ. ಸ್ವಯಂ ಸೇವಕರು ನಿಜವಾಗಿಯೂ ದೇಶಪ್ರೇಮಿಗಳು ಮತ್ತು ಸ್ವಹಿತಾಸಕ್ತಿಯನ್ನು ಚಿಂತಿಸುವ ಯಾವುದೇ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ನಾನು ಕಂಡಿಲ್ಲ. ಆರ್‌ಎಸ್‌ಎಸ್ ಬಿಟ್ಟರೆ ರಾಷ್ಟ್ರಕ್ಕಾಗಿ ಇಂಥ ಸಮರ್ಪಣೆ, ದೇಶಪ್ರೇಮ ಹೊಂದಿರುವ ಅನ್ಯ ಸಂಸ್ಥೆಯನ್ನು ಜಗತ್ತಿನಲ್ಲಿ ನಾ ಕಾಣೆ ಎಂದು ಅವರು ಹೇಳಿದ್ದಾರೆ.
ನಾನು ಐಪಿಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದ ದಿನಗಳಿಂದಲೂ ಆರ್‌ಎಸ್‌ಎಸ್‌ನ ಸಾಹಚರ್ಯ ಹೊಂದಿದ್ದೇನೆ. ಪೂರ್ಣಾವಧಿ ಪ್ರಚಾರಕನಾಗಿ ಆರ್‌ಎಸ್‌ಎಸ್‌ಗೆ ಸೇರುವ ನನ್ನ ಇಚ್ಛೆಯನ್ನು ತಿಳಿಸಿದ್ದೇನೆ. ನನ್ನ ಸೇವೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಸಂಘಟನೆ ನಿರ್ಧರಿಸಬೇಕು ಎಂದು ಜಾಕೋಬ್ ನುಡಿದಿದ್ದಾರೆ.