Sunday, September 8, 2024
Homeರಾಜ್ಯಮಾಜಿ ಸಚಿವ ಬಿ.ನಾಗೇಂದ್ರ 6 ದಿನ ಇಡಿ ವಶಕ್ಕೆ

ಮಾಜಿ ಸಚಿವ ಬಿ.ನಾಗೇಂದ್ರ 6 ದಿನ ಇಡಿ ವಶಕ್ಕೆ

ಬೆಂಗಳೂರು,ಜು.13- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಶುಕ್ರವಾರ ಬೆಳಗ್ಗೆ ಡಾಲರ್‌ರ‍ಸ ಕಾಲೋನಿಯಲ್ಲಿರುವ ನಾಗೇಂದ್ರ ಅವರ ಫ್ಲಾಟ್‌ನಲ್ಲಿ ಇಡಿ ಅಧಿಕಾರಿಗಳು ಬಂಧಿಸಿ ಬೆಂಗಳೂರಿನ ಶಾಂತಿನಗರ ಕಚೇರಿಯಲ್ಲಿ ಸರಿಸುಮಾರು 22 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.

ನಿಯಮದಂತೆ ಆರೋಪಿಯೊಬ್ಬರನ್ನು ವಶಕ್ಕೆ ಪಡೆದ ನಂತರ 24 ಗಂಟೆಯೊಳಗೆ ನ್ಯಾಯಾಲಯ ಇಲ್ಲವೇ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ಅದರಂತೆ ಇಡಿ ಅಧಿಕಾರಿಗಳು ಶನಿವಾರ ಮುಂಜಾನೆ ಯಲಹಂಕದಲ್ಲಿರುವ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್‌ ಅವರ ಮುಂದೆ ಹಾಜರುಪಡಿಸಿದರು.

ಮೊದಲು ಆರೋಪಿ ನಾಗೇಂದ್ರ ಅವರನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಕೋರಿದರು. ಅಂತಿಮವಾಗಿ ನ್ಯಾಯಾಲಯ ಆರು ದಿನಗಳ ಕಾಲ ವಶಕ್ಕೆ ನೀಡಿ ಆದೇಶ ನೀಡಿತು. ಪುನಃ ಅಂದರೆ ಜುಲೈ 18ರಂದು ತಮ ಮುಂದೆ ಹಾಜರುಪಡಿಸಬೇಕೆಂದು ಇಡಿ ಅಧಿಕಾರಿಗಳಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು.

ಈ ವೇಳೆ ಆರೋಪಿ ಸ್ಥಾನದಲ್ಲಿರುವ ನಾಗೇಂದ್ರ ಅವರು ತಮಗೆ ಆರೋಗ್ಯದ ಸಮಸ್ಯೆ ಇರುವುದನ್ನು ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡರು. ಬಿಪಿ, ಆಯಾಸ ಇದೆ ಎಂದು ನ್ಯಾಯಮೂರ್ತಿಗಳ ಗಮನಸೆಳೆಯುವ ಪ್ರಯತ್ನ ಮಾಡಿದರು. ಪ್ರತಿದಿನ ಮೂರು ಗಂಟೆ ಮಾತ್ರ ವಿಚಾರಣೆ ನಡೆಸಬಹುದು. ವಿಚಾರಣೆಯ ನಂತರ 30 ನಿಮಿಷಗಳ ಕಾಲ ವಿಶ್ರಾಂತಿ ನೀಡಬೇಕು. ಅಲ್ಲದೆ ಅವರಿಗೆ ಪ್ರತಿದಿನ ವೈದ್ಯಕೀಯ ತಪಾಸಣೆಗೊಳಪಡಿಸಬೇಕೆಂದು ಇಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಈ ವೇಳೆ ನಾಗೇಂದ್ರ ನ್ಯಾಯಾಧೀಶರ ಮುಂದೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ನಿಯಮದಂತೆಯೇ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಹಣ ವರ್ಗಾವಣೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು.

ನನಗೆ ಆರೋಗ್ಯ ಸಮಸ್ಯೆ ಇದೆ. ಹೀಗಾಗಿ ವೈದ್ಯಕೀಯ ನೆರವು ಬೇಕು. ಇಡಿ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದನ್ನು ಮನ್ನಿಸಿದ ನ್ಯಾಯಾಧೀಶರು ಆರೋಪಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕೆಂದು ಸೂಚನೆ ನೀಡಿದರು.

ಇದಕ್ಕೂ ಮುನ್ನ ಇಡಿ ಪರ ಹಾಜರಾದ ವಿಶೇಷ ಸಾರ್ವಜನಿಕ ಅಭಿಯೋಜಕ ನಾಗೇಂದ್ರ ಅವರನ್ನು ಹೆಚ್ಚಿನ ವಿಚಾರಣೆ ನಡೆಸಬೇಕು. ಇದು ಬಹುಕೋಟಿ ಹಗರಣವಾಗಿದೆ. ಒಂದು ರಾಜ್ಯದಿಂದ ಎರಡು ರಾಜ್ಯಗಳಿಗೆ ಹಣ ವರ್ಗಾವಣೆಯಾಗಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು.

ನೂರಾರು ಕೋಟಿ ಅವ್ಯವಹಾರ ಹೇಗೆ ನಡೆಯಿತು ಎಂಬುದರ ಕುರಿತು ವಿಸ್ತೃತ ಚರ್ಚೆ ನಡೆಯಬೇಕು, ಆರೋಪಿ ಸ್ಥಾನದಲ್ಲಿರುವವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು 14 ದಿನ ಇಡಿ ಅಧಿಕಾರಿಗಳ ವಶಕ್ಕೆ ನೀಡುವಂತೆ ಕೋರಿದರು.

ಅಂತಿಮವಾಗಿ ನ್ಯಾಯಾಲಯ ಆರು ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿ ಇದೇ 18ರಂದು(ಗುರುವಾರ) ಬೆಳಗ್ಗೆ 11.30ಕ್ಕೆ ಹಾಜರುಪಡಿಸಬೇಕೆಂದು ನಿರ್ದೇಶನ ನೀಡಿದರು.
ನಾಗೇಂದ್ರ ಅವರನ್ನು ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅದಕ್ಕೂ ಮುನ್ನ ಸತತ 40 ಗಂಟೆಗಳ ಕಾಲ ನಾಗೇಂದ್ರ ಅವರ ಮನೆ ಹಾಗೂ ಕಚೇರಿಯನ್ನು ತಪಾಸಣೆ ನಡೆಸಲಾಗಿತ್ತು.

ನಾಗೇಂದ್ರಗೆ ನಿನ್ನೆ ತಡರಾತ್ರಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆ ಮುಗಿಸಿ ನಿನ್ನೆ ರಾತ್ರಿ ಇಡಿ ಕಚೇರಿಗೆ ಕರೆತರಲಾಗಿತ್ತು. ಬೌರಿಂಗ್‌ ಆಸ್ಪತ್ರೆಯ ವೈದ್ಯರು, ಆರೋಗ್ಯ ಸ್ಥಿರವಾಗಿದೆ ಎಂದು ರಿಪೋರ್ಟ್‌ ನೀಡಿದ್ದಾರೆ.

ಶನಿವಾರ ಬೆಳಗ್ಗೆ ನಾಗೇಂದ್ರರನ್ನು ಕರೆತರುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಹೀಗಾಗಿ ನಿನ್ನೆ ರಾತ್ರಿಯೂ ಇಡಿ ಕಚೇರಿಯಲ್ಲೇ ಅವರನ್ನು ಅಧಿಕಾರಿಗಳು ಇರಿಸಿಕೊಂಡಿದ್ದರು. ಇಡಿ ಕಚೇರಿಯಲ್ಲೇ ಮಲಗಲು ಬೆಡ್ಶೀಟ್‌‍, ದಿಂಬು ತರಿಸಿಕೊಂಡಿದ್ದರು. ಲೋಕಲ್‌ ಪೊಲೀಸ್‌‍ ಸ್ಟೇಷನ್‌ಗೂ ಕರೆದೊಯ್ಯದೆ ವಿಚಾರಣಾ ಗೌಪ್ಯತೆ ಕಾಪಾಡಿಕೊಂಡಿದ್ದರು.

RELATED ARTICLES

Latest News