ಬೆಂಗಳೂರು,ಸೆ.23-ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್
ಅವರ ತಾಯಿ ಸುಶೀಲಮ್ಮ ಇಂದು ನಿಧನರಾಗಿದ್ದಾರೆ.ಶಿಕ್ಷಕಿಯಾಗಿ ನಿವೃತ್ತಿಯಾಗಿದ್ದ ಸುಶೀಲಮ್ಮ ಅವರು, ಎಲ್ಲರ ಟೀಚರ್ ಎಂದೇ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಈ ಕುರಿತು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್ ಕುಮಾರ್, ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು ಎಂದು ಬರೆದುಕೊಂಡಿದ್ದಾರೆ. ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಸಂತಾಪ: ಸುಶೀಲಮ್ಮನವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಕೆ. ಗೋಪಾಲಯ್ಯ, ಡಾ.ಅಶ್ವತ್ಥನಾರಾಯಣ ಸೇರಿದಂತೆ ಅನೇಕರು ತಾಯಿಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.