ಬೆಂಗಳೂರು,ಜ.7- ಬಹುಕೋಟಿ ಮೌಲ್ಯದ ಚಿನ್ನ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವರೊಬ್ಬರ ಹೆಸರು ತಳಕು ಹಾಕಿಕೊಂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಿದೆ.ಐಶ್ವರ್ಯಗೌಡ ಅವರು ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳಿಕೊಂಡು ಚಿನ್ನದ ವ್ಯಾಪಾರಿಗಳು, ವೈದ್ಯರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ಹಲವಾರು ಮಂದಿಗೆ ಬಹುಕೋಟಿ ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.
ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳಾದ ಐಶ್ವರ್ಯಗೌಡ ಮತ್ತು ಆಕೆಯ ಪತಿಗೆ ಸೇರಿದ್ದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಲಾರಂಭಿಸಿದರು.ಈ ವೇಳೆ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಒಂದೊಂದಾಗಿ ಜಪ್ತಿ ಮಾಡುವ ಸಂದರ್ಭದಲ್ಲಿ ಒಂದು ಕಾರು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ವಿನಯ್ಕುಲಕರ್ಣಿಯವರ ಬಳಿ ಇರುವುದು ಪತ್ತೆಯಾಗಿದೆ.
ಐಶ್ವರ್ಯ ಗೌಡ ಆರಂಭದಿಂದಲೂ ತಮಗೆ ಗಣ್ಯರೊಂದಿಗೆ ಸಂಪರ್ಕವಿದೆ. ಡಿ.ಕೆ.ಸಹೋದರರ ತಂಗಿ ನಾನು ಎಂದು ಹೇಳಿಕೊಂಡು ಹಲವಾರು ಮಂದಿಗೆ ಧಮ್ಕಿ ಹಾಕಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ನೀಡದಂತೆ ಬೆದರಿಸಿರುವ ಆಡಿಯೋಗಳು ಸಾಕಷ್ಟು ವೈರಲ್ ಆಗಿವೆ.
ಈ ಮೊದಲು ಐಶ್ವರ್ಯಗೌಡ ಹಲವಾರು ಮಂದಿ ಶಾಸಕರನ್ನು ತಮ ಊರಿಗೆ ಕರೆದುಕೊಂಡು ಹೋಗಿರುವುದು ಜಾತ್ರೆ, ಹಬ್ಬ ಹರಿದಿನಗಳಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಾಮಾನ್ಯವಾಗಿದೆ. ವಿನಯ್ಕುಲಕರ್ಣಿ ಕೂಡ ಒಮೆ ಐಶ್ವರ್ಯಗೌಡ ಅವರ ಊರಿಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಂದಿಗೆ ಪಕ್ಷದ ಗಣ್ಯರ ಹೆಸರು ತಳಕು ಹಾಕಿಕೊಳ್ಳುತ್ತಿರುವುದು ಕಾಂಗ್ರೆಸ್ಗೆ ಮುಜುಗರವಾಗುತ್ತಿದೆ.