ನವದೆಹಲಿ,ಏ.29- ಕಳೆದ ಏ.22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಗುರುತಿಸಿದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಲ್ಲಿ ಒಬ್ಬನಾದ ಹಾಶಿಮ್ ಮೂಸಾ, ಪಾಕಿಸ್ತಾನ ಸೇನೆಯ ಮಾಜಿ ನಿಯಮಿತ ಅಧಿಕಾರಿ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಯ ಪ್ರಮುಖ ಕಾರ್ಯಕರ್ತನಾಗಿರುವ ಮೂಸಾ ಜಮು ಮತ್ತು ಕಾಶೀರಕ್ಕೆ ಪ್ರವಾಸಿಗರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಕಳುಹಿಸಲಾಗಿತ್ತು.
ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕಿಸ್ತಾನಿ ಸೇನೆ ಕೈವಾಡ ಇರುವುದು ಎನ್‌ಐಎ ತನಿಖೆಯಲ್ಲಿ ಒಂದೊಂದೇ ಬಯಲಾಗುತ್ತಿದೆ. ಭಯೋತ್ಪಾದಕ ಸಂಘಟನೆಗಳು, ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಯ ನಡುವಿನ ನಿಕಟ ಸಂಬಂಧಗಳ ಕುರಿತು ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಹಾಶಿಮ್ ಮೂಸಾ ಪಾಕಿಸ್ತಾನ ವಿಶೇಷ ಪಡೆಗಳಲ್ಲಿ ಪ್ಯಾರಾ ಕಮಾಂಡೋ ಆಗಿದ್ದ. ವಿಶೇಷ ಸೇವಾ ಗುಂಪು (ಎಸ್‌ಎಸ್‌ಜಿ) ನಂತಹ ಪಾಕಿಸ್ತಾನದ ವಿಶೇಷ ಪಡೆಗಳು ಅವನನ್ನು ಎಲ್‌ಇಟಿಗೆ ನೀಡಿರಬಹುದು ಎಂದಿದ್ದಾರೆ.
ಇನ್ನು ಈ ಮೂಸಾ ಜಮು-ಕಾಶೀರದಲ್ಲಿ ಹಲವು ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದು, 2024 ರ ಅಕ್ಟೋಬರ್‌ನಲ್ಲಿ ಗಂಡರ್‌ಬಾಲ್‌ನ ಗಗಂಗೀರ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ. ಈ ದಾಳಿಯಲ್ಲಿ ಆರು ಪ್ರವಾಸಿಗರು ಮತ್ತು ವೈದ್ಯರನ್ನು ಹತ್ಯೆ ಮಾಡಲಾಗಿತ್ತು. ಬಾರಾಮುಲ್ಲಾದ ಬುಟಾ ಪತ್ರಿಯಲ್ಲಿ ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲೂ ಮೂಸಾ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ.
ಪಾಕಿಸ್ತಾನ ಸೇನೆಯು ಮೂಸಾನನ್ನು ತನ್ನ ಶ್ರೀಣಿಯಿಂದ ವಜಾಗೊಳಿಸಿದ ನಂತರ ಅವನು ನಿಷೇಧಿತ ಭಯೋತ್ಪಾದಕ ಗುಂಪು ಲರ್ಷ್ಕ-ಎ-ತೈಬಾ ಗೆ ಸೇರಿದನು. 2023ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ನುಸುಳಿ ಬಂದನು ಎಂದು ನಂಬಲಾಗಿದೆ, ಅವನ ಕಾರ್ಯಾಚರಣೆಯ ಪ್ರದೇಶವು ಮುಖ್ಯವಾಗಿ ಕಾಶೀರದ ಬುಡ್ಗಾಮ್ ಜಿಲ್ಲೆಯಲ್ಲಿ, ಶ್ರೀನಗರ ಬಳಿ ಇರುತ್ತದೆ.
ಮೂಸಾನನ್ನು ಎಲ್‌ಇಟಿಗೆ ಸೇರಲು ಮತ್ತು ಭಯೋತ್ಪಾದಕ ಸಂಘಟನೆಯ ಕಾಶೀರ ಕಾರ್ಯಾಚರಣೆಗಳನ್ನು ಬಲಪಡಿಸಲು ಸಂಘಟನೆ ಮುಖ್ಯಸ್ಥರು ಕೇಳಿರಬಹುದು. ತರಬೇತಿ ಪಡೆದ ಪ್ಯಾರಾ ಕಮಾಂಡೋ ಮೂಸಾ ಅಸಾಂಪ್ರದಾಯಿಕ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಪರಿಣಿತ ಹೊಂದಿದ್ದಾನೆ ಎಂದು ನಂಬಲಾಗಿದೆ.
ಅಂತಹ ತರಬೇತಿ ಪಡೆದ ಕಮಾಂಡೋಗಳು ಸಾಮಾನ್ಯವಾಗಿ ಅತ್ಯಾಧುನಿಕ ಶಸಾಸಗಳನ್ನು ನಿರ್ವಹಿಸುವಲ್ಲಿ ಪರಿಣತರಾಗಿದ್ದು, ಹೆಚ್ಚಿನ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಶಂಕಿತರೆಂದು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ 14 ಕಾಶೀರಿ ಓವರ್ ಗ್ರೌಂಡ್ ವರ್ಕರ್‌ಗಳಲ್ಲಿ ಒಬ್ಬನಾದ ಮೂಸಾನ ಎಸ್‌ಎಸ್‌ಜಿ ಹಿನ್ನೆಲೆಯನ್ನು ಬಹಿರಂಗಪಡಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಣಿವೆಯಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಪಾತ್ರವು ಈಗ ಸ್ಪಷ್ಟವಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ, ಈ ದಾಳಿಯಲ್ಲಿ 6 ಸ್ಥಳೀಯೇತರರು, ಒಬ್ಬ ವೈದ್ಯರು, ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಮತ್ತು ಇಬ್ಬರು ಸೇನಾ ಪೋರ್ಟರ್‌ಗಳು ಮೃತಪಟ್ಟಿದ್ದು, ಕಳೆದ ವರ್ಷ ನಡೆದ ದಾಳಿಗಳಲ್ಲಿ ಮೂಸಾ ಕೂಡ ಭಾಗಿಯಾಗಿದ್ದಾನೆ.
ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಾದ ಮೂಸಾ ಮತ್ತು ಅಲಿ ಭಾಯ್ ಮತ್ತು ಇಬ್ಬರು ಸ್ಥಳೀಯರಾದ ಆದಿಲ್ ಥೋಕರ್ ಮತ್ತು ಆಸಿ್ ಶೇಖ್ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಈಗ ದೃಢಪಟ್ಟಿದ್ದರೂ, ಒಜಿಡಬ್ಲ್ಯೂಗಳ ವಿಚಾರಣೆಯು ಹೆಚ್ಚಿನ ಪಾಕಿಸ್ತಾನಿ ಭಯೋತ್ಪಾದಕರ ಭಾಗಿಯಾಗಿರುವ ಬಗ್ಗೆ ಸುಳಿವು ನೀಡುತ್ತದೆ.
ಏ. 22 ರಂದು ಕಾಶೀರದ ಪಹಲ್ಗಾಮ್ ಬಳಿಯ ಜನಪ್ರಿಯ ಹುಲ್ಲುಗಾವಲಿನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ ಕನಿಷ್ಠ 26 ಜನರು ಮೃತಪಟ್ಟಿದ್ದು ಅವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. 2019 ರ ಪುಲ್ವಾಮಾ ದಾಳಿಯ ನಂತರ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ಘಟನೆ ಇದಾಗಿದೆ.