ಬೆಂಗಳೂರು,ಮೇ 18– ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು 91 ವರ್ಷವನ್ನು ಪೂರೈಸಿದ್ದು, 92 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ ದೇವೇಗೌಡರು ತಮ ಹುಟ್ಟುಹಬ್ಬದ ನಿಮಿತ್ತ ಜೆ.ಪಿ.ನಗರದ ತಿರುಮಲಗಿರಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವೇಗೌಡರ ಪುತ್ರ ಬಾಲಕೃಷ್ಣೇಗೌಡ ಗೌಡರ ಜೊತೆಗಿದ್ದರು. ಕಾರಣಾಂತರಗಳಿಂದ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಜೆಡಿಎಸ್‌ನ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾವಿದ್ದಲ್ಲಿಯೇ ಹಾರೈಸಬೇಕು ಎಂದು ಗೌಡರು ಕೋರಿದ್ದರು. ಅಲ್ಲದೆ, ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಬದ್ಧತೆಯಿಂದ ಪಕ್ಷ ಸಂಘಟನೆಯ ಕರ್ತವ್ಯ ನಿರ್ವಹಿಸಬೇಕು ಎಂದು ಕೋರಿದ್ದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯದ ಹಲವು ಗಣ್ಯರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ದೇವೇಗೌಡರು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿಯವರು ಕೃಷಿ, ಗ್ರಾಮೀಣಾಭಿವೃದ್ಧಿ ಕುರಿತಂತೆ ಗೌಡರು ಹೊಂದಿರುವ ಒಲವು ಗಮನಾರ್ಹವಾಗಿದೆ. ಅವರಿಗೆ ದೀರ್ಘವಾದ ಆಯಸ್ಸು, ಆರೋಗ್ಯ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಬೆಂಗಳೂರು ಮಹಾನಗರ ಜೆಡಿಎಸ್ ಪಕ್ಷದ ವತಿಯಿಂದ ಜೆ.ಪಿ.ಭವನದಲ್ಲಿಂದು ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪಕ್ಷದ ಹಲವು ಮುಖಂಡರು ಪಾಲ್ಗೊಂಡು ಗೌಡರಿಗೆ ಶುಭ ಕೋರಿದರು.ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹುಟ್ಟುಹಬ್ಬದ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದರು.