ಬೆಂಗಳೂರು, ಅ.31 – ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಲಾರಪ್ಪ ಅವರು ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸಾವನ್ನಪ್ಪಿದ್ದರು.
ಮಗನ ಸಾವಿಗೆ ಆಕೆಯೇ ಕಾರಣವೆಂದು ಆಕೆಯ ಅತ್ತೆ, ಮಾವ ಮಹಾಲಕ್ಷ್ಮೀ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ವಿಷಯ ತಿಳಿದ ಮೈಲಾರಪ್ಪ ಇಸ್ಕಾನ್ ಹತ್ತಿರವಿರುವ ಹೋಟೆಲ್ ಬಳಿ ಸಂತ್ರಸ್ತೆಯನ್ನು ಮಾತನಾಡಬೇಕೆಂದು ಕರೆಸಿಕೊಂಡಿದ್ದರು. ಕೆಲವು ಪತ್ರಗಳಿಗೆ ಸಹಿ ಹಾಕುವಂತೆ ಮೈಲಾರಪ್ಪ ಅವರು ಹೇಳಿದಾಗ ಸಂತ್ರಸ್ತೆ ನಿರಾಕರಿಸಿದ್ದರು. ಅದರಿಂದ ಕೋಪಗೊಂಡು ಮೈಲಾರಪ್ಪ ಅವರು ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.
ಅಲ್ಲದೇ ಸಂತ್ರಸ್ತೆ ಮನೆ ಬಳಿ ಹೋಗಿ ಬೆದರಿಕೆ ಹಾಕಿ ಲೈಗಿಂಕ ಕಿರುಕುಳ ನೀಡಿದ್ದರಿಂದ ಆಕೆ ಬಸವೇಶ್ವರನಗರ ಠಾಣೆ ಪೊಲೀಸರಿಗೆ ಮೈಲಾರಪ್ಪ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೈಲಾರಪ್ಪ ಅವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್: ಮೈಲಾರಪ್ಪ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಈ ಸಂತ್ರಸ್ತೆ ಮಹಿಳೆ ದೂರು ನೀಡಿದ್ದು, ಎಫ್‌ಐಆದಾಖಲಾಗಿದೆ. ವಕೀಲನ ಜೊತೆ ಸಂತ್ರಸ್ತೆ ಮಹಿಳೆಯು ಅನೈತಿಕ ಸಂಬಂಧ ಹೊಂದಿದ್ದಾಳೆ. ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿ ಆಕೆಯ ಮಾವ -ಅತ್ತೆಯನ್ನು ಜ್ಞಾನಭಾರತಿ ಕ್ಯಾಂಪಸ್‌ಗೆ ಕರೆಸಿಕೊಂಡು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಮೈಲಾರಪ್ಪ ಧಮ್ಮಿ ಹಾಕಿದ್ದರಿಂದ ಆಕೆ ದೂರು ನೀಡಿದ್ದಾರೆ.

