Sunday, October 6, 2024
Homeಆರೋಗ್ಯ / ಜೀವನಶೈಲಿವಿಶ್ವ ಹೃದಯ ದಿನದ ಪ್ರಯುಕ್ತ ಹೃದಯ ಆರೋಗ್ಯದ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಜಾಗೃತಿ ಅಭಿಯಾನ

ವಿಶ್ವ ಹೃದಯ ದಿನದ ಪ್ರಯುಕ್ತ ಹೃದಯ ಆರೋಗ್ಯದ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಜಾಗೃತಿ ಅಭಿಯಾನ

ಬೆಂಗಳೂರು, ವಿಶ್ವ ಹೃದಯ ದಿನದ ಪ್ರಯುಕ್ತ ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯು ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸಿತು. ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದ್ದು, ಪ್ರತಿಯೊಬ್ಬರು ಈ ಬಗ್ಗೆ ಜಾಗೃತಿ ವಹಿಸಬೇಕು. ಹೃದಯಾಘಾತ ತಡೆಗಟ್ಟುವ ಕ್ರಮ ಹಾಗೂ ಅದರ ಪ್ರಾಮುಖ್ಯತೆ ಮತ್ತು ಹೃದಯ ಸಂಬಂಧಿ ತುರ್ತುಸ್ಥಿತಿಗಳಲ್ಲಿ ಸಮಯೋಚಿತ ನಿರ್ಣಯಗಳ ಬಗ್ಗೆ ಅರಿವು ಮೂಡಿಸಲು ಸರಣಿ ಚಟುವಟಿಕೆ ಆಯೋಜಿಸಲಾಗಿತ್ತು.

ರೋಗಿಗಳಿಗೆ ಹೃದಯ ಆರೋಗ್ಯದ ಬಗ್ಗೆ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. ಹೃದಯದ ತುರ್ತುಸ್ಥಿತಿಗಳು ಮತ್ತು ಸೂಕ್ತ ಪ್ರತಿಕ್ರಿಯೆಗಳ ಬಗ್ಗೆ ಯಾವೆಲ್ಲಾ ಕ್ರಮಗಳು ಕೈಗೊಳ್ಳಬೇಕು ಎಂಬುದರ ಕುರಿತು ರಸಪ್ರಶ್ನೆ ಒಳಗೊಂಡಿತ್ತು. ಇದಷ್ಟೇ ಅಲ್ಲದೆ, ಆರೋಗ್ಯಕರ ಹೃದಯದ ಸಂದೇಶವನ್ನು ಬಲಪಡಿಸುವ ಒಗಟು ಬಿಡಿಸುವ ಸವಾಲು ನೀಡಲಾಗಿತ್ತು.

ಪ್ರತಿಯೊಬ್ಬ ರೋಗಿಯು ಉತ್ಸುಕರಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಿ, ಆಸಕ್ತಿದಾಯ ಉತ್ತರ ನೀಡಿದರು. ರಸಪ್ರಶ್ನೆ ವಿಜೇತರಿಗೆ ಬಿಪಿ ಉಪಕರಣ, ಪಲ್ಸ್ ಆಕ್ಸಿಮೀಟರ್‌ ಮತ್ತು ಗ್ಲುಕೋಮೀಟರ್‌ಗಳು ಸೇರಿದಂತೆ ಅಗತ್ಯ ಆರೋಗ್ಯ ಮೇಲ್ವಿಚಾರಣಾ ಸಾಧನಗಳನ್ನು ಬಹುಮಾನವಾಗಿ ನೀಡಲಾಯಿತು.

ಹೃದಯ ಆರೋಗ್ಯದ ಬಗ್ಗೆ ಕೇವಲ ಆಸ್ಪತ್ರೆಯಷ್ಟೇ ಅಲ್ಲದೆ, ಆಸ್ಪತ್ರೆ ಹೊರಭಾಗದಲ್ಲೂ ಹಲವು ಚಟುವಟಿಕೆಯನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಪ್ರಮುಖವಾಗಿ ನಾಗರಭಾವಿ ಲುಲು ಮಾಲ್ ಮತ್ತು ಡಿವಿನಿಟಿ ಮಾಲ್‌ನಲ್ಲಿ ಸಾರ್ವಜನಿಕರಿಗೆ ಸೈಕ್ಲಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಹೃದಯ ಅಪಾಯದ ಮೌಲ್ಯಮಾಪನಗಳೊಂದಿಗೆ ಪುಷ್-ಅಪ್ ಸ್ಪರ್ಧೆಗಳು ಮತ್ತು ಬಲೂನ್ ಊದುವಿಕೆಯಂತಹ ವಿನೋದ ಭರಿತ ಚಟುವಟಿಕೆಗಳನ್ನು ನಡೆಸಲಾಯಿತು.

ಇದಷ್ಟೇ ಅಲ್ಲದೆ, ಸರ್ವೋದಯ ಕಾಲೇಜು, ಆರ್‌ಆರ್ ನಗರ ಪಾರ್ಕ್ ಮತ್ತು ಇನ್‌ಫೆಂಟ್ ಜೀಸಸ್ ಚರ್ಚ್‌ನಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಿತು. ಈ ಶಿಬಿರಗಳು ಸಾರ್ವಜನಿಕರಿಗೆ ಮೂಲಭೂತ ಆರೋಗ್ಯ ಮೌಲ್ಯಮಾಪನಗಳನ್ನು ನೀಡಲಾಯಿತು.

ಒಗ್ಗಟ್ಟಿನ ಸಾಂಕೇತಿಕ ಸೂಚಕವಾಗಿ, ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯನ್ನು ಕೆಂಪು ಬಣ್ಣದಲ್ಲಿ ಬೆಳಗಿಸಲಾಯಿತು, ಇದು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಾರ್ವತ್ರಿಕ ಬಣ್ಣವಾಗಿದೆ. ಈ ದೃಶ್ಯ ಪ್ರತಿಯೊಬ್ಬರಲ್ಲೂ ತಮ್ಮ ಹೃದಯದ ಆರೋಗ್ಯ ಕಾಪಾಡುವಿಕೆಗೆ ನೀಡಿದ ಸಂದೇಶವಾಗಿತ್ತು. ಒಟ್ಟಾರೆ, ಹೃದಯಾಘಾತ ತಡೆಗಟ್ಟುವಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಆಯ್ಕೆಗಳ ಮೂಲಕ ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂಬ ಸಂದೇಶವನ್ನು ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯು ಎಲ್ಲೆಡೆ ಸಾರಿತು.

RELATED ARTICLES

Latest News