ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿಯೇ ಮುಂಚೂಣಿಯಲ್ಲಿರುವ “ಡಾ ವಿನ್ಸಿ ಕ್ಸಿ (Da Vinci Xi)” ರೋಬೋಟ್ ಮೂಲಕ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯು ಮೂತ್ರಕೋಶಕ್ಕೆ ಸಂಬಂಧಿಸಿದ 1000 ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿದೆ.
ಇದೇ ತಂತ್ರಜ್ಞಾನವನ್ನು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲೂ ಪ್ರಾರಂಭಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, 2018 ರಲ್ಲಿ ಮೊದಲ ಬಾರಿಗೆ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ “ಡಾ ವಿನ್ಸಿ ಕ್ಸಿ” ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಅದಾದ 79 ತಿಂಗಳುಗಳಲ್ಲಿ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ರೊಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ ಮೂಲಕ ಯುರೋ-ಆಂಕೊಲಾಜಿ, ಯುರೋ-ಗೈನಕಾಲಜಿ, ಮೂತ್ರಶಾಸ್ತ್ರ, ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ನಂತಹ ಸಂಕೀರ್ಣ ಕಾರ್ಯವಿಧಾನಗಳ ಶಸ್ತ್ರಚಿಕಿತ್ಸೆಯನ್ನು ಅತಿ ಸುಲಭ ಹಾಗೂ ನಿಖರವಾಗಿ ಮಾಡಲಾಗಿದೆ. ಡಾ ವಿನ್ಸಿ ಕ್ಸಿ ರೋಬೋಟ್ ಮೂಲಕ ನಡೆಸಲಾದ ಶಸ್ತ್ರಚಿಕಿತ್ಸೆಗಳಲ್ಲಿ 92 ರೋಬೋಟಿಕ್ ಕಿಡ್ನಿ ಟ್ರಾನ್ಸ್‌ಪ್ಲಾಂಟ್, 398 ನರ-ಸ್ಪೇರಿಂಗ್ ರೋಬೋಟಿಕ್ ರಾಡಿಕಲ್ ಪ್ರಾಸ್ಟೇಟೆಕ್ಟಮಿ, 282 ರೋಬೋಟಿಕ್ ಕಾಂಪ್ಲೆಕ್ಸ್ ಪಾರ್ಶಿಯಲ್ ನೆಫ್ರೆಕ್ಟಮಿಗಳು ಮತ್ತು 54 ಪೀಡಿಯಾಟ್ರಿಕ್ ರೋಬೋಟಿಕ್ ಕಾರ್ಯವಿಧಾನಗಳು ಸೇರಿವೆ.
ಡಾ ವಿನ್ಸಿ ಎಕ್ಸ್ ಒಂದು ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ರೋಬೋಟ್ ಮೂಲಕ ನಿಖರವಾಗಿ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಅಷ್ಟೇ ಅಲ್ಲದೆ, ಈ ಸುಧಾರಿತ ತಂತ್ರಜ್ಞಾನವು ಸುತ್ತಮುತ್ತಲಿನ ಅಂಗಾಂಶಗಳಿಗೆ ಯಾವುದೇ ಹಾನಿ ಮಾಡದೇ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಅವಧಿಯಲ್ಲೇ ಮಾಡಬಹುದಾಗಿದೆ ಎಂದು ವಿವರಿಸಿದರು.