ಮಂಗಳೂರು,ಫೆ.17: ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು ಬೀಡಿ ಉದ್ಯಮಿ ಮನೆಯಲ್ಲಿ ಸುಮಾರು 30 ಲಕ್ಷ ರೂ. ನಗದು ದೋಚಿದ ಪ್ರಕರಣ ತಿರುವು ಪಡೆದಿದ್ದು ಮಾಸ್ಟರ್ ಮೈಂಡ್ ಕೇರಳದ ಪೊಲೀಸ್ ಅಧಿಕಾರಿ ಎಂಬುದು ಗೊತ್ತಾಗಿದೆ. ಕಳೆದ ಜ.3 ರಂದು ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಕಾರ್ಖಾನೆಯ ಮಾಲೀಕ ಹಾಗು ಉದ್ಯಮಿ ಮನೆಗೆ ಇಡಿ ಹೆಸರಲ್ಲಿ ದಾಳಿ ಮಾಡಿ ಹಣ ದೋಚಲಾಗಿತ್ತು.
ಪ್ರಕರಣದ ದಾಖಲಿಸಿ ಜಾಲದ ಜಾಡು ಹಿಡಿದ ಪೊಲೀಸರ ತನಿಖಾ ತಂಡವು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡಿಸ್ (49), ಸಚ್ಚಿನ್ ಟಿ ಎಸ್ (29) ಹಾಗೂ ಶಬಿನ್‌ಸ್ (27) ಎಂಬವರನ್ನು ಬಂಧಿಸಿತ್ತು.
ಬಳಿಕ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ಆರೋಪಿ ಕೊಳ್ಳಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಬಂಟ್ವಾಳ ನಿವಾಸಿ ಮೊಹಮ್ಮದ್ ಇಟ್ಬಾಲ್ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರನಾದ ಕೇರಳದ ಶಫೀರ್ ಬಾಬು (48) ನನ್ನು ಬಂಧಿಸಿದ್ದಾರೆ. ಶಫೀರ್ ಬಾಬು ಕೇರಳದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಎಂದು ಗೊತ್ತರಾಗಿದೆ.
ನಮ್ಮ ಪೊಲೀಸರ ನಾಲ್ಕು ತಂಡಗಳು ಕೇರಳದ ಕೊಲ್ಲಂ ಸೇರಿ ವಿವಿಧ ಕಡೆ ಸತತ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ. ಕೇರಳ ಪೊಲೀಸ್ ಅಧಿಕಾರಿ ಈ ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾಹಿತಿ ನೀಡಿದ್ದಾರೆ.
ಇಡಿ ಹೆಸರಿನಲ್ಲಿ ನಡೆದಿದ್ದ ನಕಲಿ ದಾಳಿ ವೇಳೆ ದೋಚಿದ್ದ 30 ಲಕ್ಷ ರೂಪಾಯಿ ನಗದಿನ ಹೆಚ್ಚಿನ ಪಾಲು ಪೊಲೀಸ್ ಅಧಿಕಾರಿಯಾದ ಎಎಸ್‌ಐ ಶಫೀರ್ ಬಾಬುಗೆ ಹೋಗಿದೆ. ಆದರೆ, ಆತನ ಬಳಿ ಪೊಲೀಸರಿಗೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ, ಎಲ್ಲಾ ಹಣವನ್ನು ಸಾಲ ತೀರಿಸಿದ್ದಾಗಿ ಆತ ಪೊಲೀಸರ ಬಳಿ ಹೇಳಿದ್ದಾನಂತೆ.
ಇನ್ನು ಸಿಂಗಾರಿ ಬೀಡಿ ಮಾಲೀಕ ಸುಲೈಮನ್ ಹಾಜಿ ಜೊತೆ ಕೆಲಸ ಮಾಡುತ್ತಿದ್ದವರೇ ನೀಡಿದ ಮಾಹಿತಿ ಮೇರೆಗೆ ಈ ನಕಲಿ ದಾಳಿ ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ತನಿಖೆ ಇನ್ನು ಕೂಡ ಮುಂದುವರೆದಿದ್ದು ಇನ್ನಷ್ಟು ವಿಚಾರಗಳು ಬಯಲಿಗೆ ಬರಲಿದೆ.