ಬೆಂಗಳೂರು, ಮೇ 23- ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ನಾಲ್ವರು ಪ್ರಬಲ ಆಕಾಂಕ್ಷಿಗಳಿದ್ದಾರೆ.
ಜೂನ್ 17 ರಂದು ನಿವೃತ್ತಿಯಿಂದ ತೆರವಾಗಲಿರುವ 11 ಸದಸ್ಯರಲ್ಲಿ ಜೆಡಿಎಸ್‌ನ ಬಿ.ಎಂ.ಫಾರುಕ್ ಅವರು ಇದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ.
ವಿಧಾನಸಭೆಯಲ್ಲಿ 19 ಶಾಸಕರನ್ನು ಹೊಂದಿರುವ ಜೆಡಿಎಸ್ ಒಂದು ಸ್ಥಾನ ಮಾತ್ರ ಪಡೆಯಲಷ್ಟೇ ಸಾಧ್ಯವಾಗಲಿದೆ. ಹೀಗಾಗಿ ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು ಇದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರುಕ್ ಮರು ಆಯ್ಕೆ ಬಯಸುತ್ತಿದ್ದರೆ, ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರರೆಡ್ಡಿ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್‌ಗೌಡ ಹಾಗೂ ಪಕ್ಷದ ಮುಖಂಡ ಟಿ.ಎನ್.ಜವರಾಯೇಗೌಡ ಅವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜೂನ್ 13 ರಂದು ವಿಧಾನಪರಿಷತ್‌ನ 11 ಸ್ಥಾನಗಳ ಆಯ್ಕೆಗಾಗಿ ನಡೆಯುವ ಚುನಾವಣೆಗೆ ಮೇ 27 ರಂದು ಅಧಿಸೂಚನೆ ಹೊರಬೀಳಲಿದೆ.ಜೂನ್ 3 ರವರೆಗೂ ಉಮೇದುವಾರಿಕೆ ಸಲ್ಲಿಸಲು ಕಾಲಾವಕಾಶವಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್‌ನಲ್ಲಿ ಸದ್ಯಕ್ಕೆ ಯಾವುದೇ ಸಭೆಯೂ ನಡೆದಿಲ್ಲ. ಮುಂದಿನ ವಾರ ಅಭ್ಯರ್ಥಿ ಆಯ್ಕೆ ಕುರಿತ ಸಭೆ ನಡೆಯಲಿದ್ದು, ಈ ನಾಲ್ವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.