ಮುಂಬೈ, ಅ.21- ಕಳೆದ ರಾತ್ರಿ ನವಿ ಮುಂಬೈನ ಬಹುಮಹಡಿ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ವಾಶಿ ಪ್ರದೇಶದ ಸೆಕ್ಟರ್-14ರಲ್ಲಿರುವ ರಹೇಜಾ ರೆಸಿಡೆನ್ಸಿಯ ಎಂಜಿಎಂ ಕಾಂಪ್ಲೆಕ್ಸ್ ನ 10ನೆ ಮಹಡಿಯ ಫ್ಲಾಟ್‌ವೊಂದರಲ್ಲಿ ರಾತ್ರಿ 12.30ರ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು 11 ಮತ್ತು 12ನೆ ಮಹಡಿಗೂ ಹರಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ದಾವಿಸಿದ 8 ಅಗ್ನಿಶಾಮಕ ವಾಹನಗಳು ಮತ್ತು 40ಕ್ಕೂ ಹೆಚ್ಚು ಸಿಬ್ಬಂದಿ ಇಂದು ಮುಂಜಾನೆ 4 ಗಂಟೆವರೆಗೂ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಆದರೆ, ಪಟಾಕಿ ಹೊಡೆಯುವಾಗ ಬೆಂಕಿ ಕಿಡಿ ತಗುಲಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಶಂಕೆ ವ್ಯಕ್ತವಾಗಿದೆ.