ಗಡ್ಡಿರೋಲಿ, ಮೇ 23- ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳನ್ನು ಕೊಂದಿವೆ . ಕವಾಂಡೆ ಪ್ರದೇಶದಲ್ಲಿ ಇತ್ತೀಚೆಗೆ ತೆರೆಯಲಾದ ಫಾರ್ವರ್ಡ್ ಆಪರೇಟಿಂಗ್ ಬೇಸ್ ಬಳಿ ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿಗಳ ಉಪಸ್ಥಿತಿಯ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
300 ಕಮಾಂಡೋಗಳು ಮತ್ತು ಸಿಆರ್‌ಪಿಎಫ್‌ನ ಒಂದು ಘಟಕವು ಭಾರೀ ಮಳೆಯ ನಡುವೆಯೂ ಕವಾಂಡೆ ಮತ್ತು ನೆಲಗುಂದ ಪ್ರದೇಶಗಳಿಂದ ಇಂದ್ರಾವತಿ ನದಿಯ ದಡದ ಕಡೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಇಂದು ಬೆಳಿಗ್ಗೆ ತಾಣ ಸುತ್ತುವರೆದು ಶೋಧಿಸುತ್ತಿದ್ದಾಗ ಮಾವೋವಾದಿಗಳ ಗುಂಡು ಹಾರಿಸಲು ಪ್ರಾರಂಭಿಸಿದರು ನಂತರ ಪ್ರತಿ ದಾಳಿ ವೇಳೆ ಗುಂಡಿನ ಚಕಮಕಿ ನಡೆದಿದೆ.
ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗುಂಡಿನ ಚಕಮಕಿ ಮುಂದುವರೆಯಿತು ಮತ್ತು ನಂತರ ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ನಡೆಸಿದ ಶೋಧದಲ್ಲಿ ನಾಲ್ವರು ಮಾವೋವಾದಿಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ಒಂದು ಸ್ವಯಂಚಾಲಿತ ರೈಫಲ್, ಎರಡು 303 ರೈಫಲ್‌ಗಳು, ಒಂದು ಭರ್ಮರ್ ಗನ್, ವಾಕಿ ಟಾಕಿಗಳು, ಕ್ಯಾಂಪಿಂಗ್ ಸಾಮಗ್ರಿಗಳು ಮತ್ತು ನಕ್ಸಲ್ ಸಾಹಿತ್ಯ, ಇತರ ವಸ್ತುಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ಅವರ ಪ್ರಮುಖ ನಾಯಕ ಬಸವರಾಜು ಸೇರಿದಂತೆ 27 ನಕ್ಸಲರನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಮಹಾರಾಷ್ಟ್ರದಲ್ಲಿ ಈ ಎನ್‌ಕೌಂಟರ್ ನಡೆದಿದೆ.