ಬೆಂಗಳೂರು,ಅ.31-ಕಿರುಕುಳದಿಂದಾಗಿ ಒಂದೇ ಕುಟುಂಬದ ನಾಲ್ವರು ಆತಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಅಪ್ಪ-ಮಗ ಮೃತಪಟ್ಟು , ತಾಯಿ ಹಾಗೂ ಮತ್ತೊಬ್ಬ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದ ಕುಮಾರಪ್ಪ (60) ಅವರು ರಿಯಲ್‌ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು.
ಇತ್ತೀಚೆಗೆ ಉದ್ಯಮದಲ್ಲಿ ನಷ್ಟ ಉಂಟಾಗಿದ್ದರಿಂದ ಕೆಲವರಿಂದ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸುವಂತೆ ಒತ್ತಡ, ಕಿರುಕುಳ ಹೆಚ್ಚಾದಾಗ ಮುಂದೇನು ಮಾಡುವುದೆಂಬುವುದು ತಿಳಿಯದೆ ಪತ್ನಿ ರಮಾ (55) ಹಾಗೂ ಮಕ್ಕಳಾದ ಅರುಣ್‌ಕುಮಾರ್(30) ಮತ್ತೊಬ್ಬ ಮಗ ಅಕ್ಷಯ್‌ಕುಮಾರ್ (25) ಜೊತೆ ಚರ್ಚಿಸಿ ಎಲ್ಲರೂ ಆತಹತ್ಯೆಗೆ ನಿರ್ಧರಿಸಿದ್ದಾರೆ.
ನಿನ್ನೆ ಸಂಜೆ ಅರುಣ್ ನೇಣಿಗೆ ಶರಣಾದರೆ ಉಳಿದ ಮೂವರು ವಿಷ ಸೇವಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಜಾಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಅಪ್ಪ-ಮಗ ಮೃತಪಟ್ಟಿದ್ದು, ತಾಯಿ -ಮಗ ಒದ್ದಾಡುತ್ತಿರುವುದು ಕಂಡು ಬಂದಿದೆ.
ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪೊಲೀಸರು ಮನೆಯನ್ನು ಶೋಧಿಸಿದಾಗ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಕೆಲವರು ನಮಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮನೆಯವರೆಲ್ಲಾ ಆತಹತ್ಯೆ ಮಾಡಿಕೊಳ್ಳುತ್ತಿದ್ದೇವೆಂದು ಬರೆಯಲಾಗಿದೆ. ಆ ಪತ್ರವನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.

