ಬೆಂಗಳೂರು, ನ.15- ಪಾರ್ಟ್ ಟೈಮ್ ಜಾಬ್ ಕೊಡಿಸುವುದಾಗಿ ನಂಬಿಸಿ ಸೈಬರ್ ಇನ್ವೆಸ್ಟ್ಮೆಂಟ್ ವಂಚನೆಗಾಗಿ ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ 12.43 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಿದ್ದ ರಾಜಸ್ಥಾನದ ವಿದ್ಯಾರ್ಥಿ ಸೇರಿದಂತೆ ನಾಲ್ವರು ವಂಚಕರನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ವಿದ್ಯಾರ್ಥಿಗಳಿಂದ ತೆರೆಸಿದ್ದ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿಕೊಂಡು ಸೈಬರ್ ಇನ್ವೆಸ್ಟ್ ಮೆಂಟ್ ಫ್ರಾಡ್ ಮಾಡಿ ಮೋಸದಿಂದ ಬಂದ ಹಣವನ್ನು ವಿತ್ಡ್ರಾ ಮಾಡಿಕೊಂಡು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಆ ಖಾತೆಗಳಿಂದ ಬಿನಾನ್‌್ಸ ಪ್ಲಾಟ್ ಫಾರಂ ಮುಖಾಂತರ ಯುಎಸ್ಡಿಟಿ (ಕ್ರಿಪ್ಟೋ ಕರೆನ್ಸಿ) ಖರೀದಿಸಿ ಅದನ್ನು ಡಿಜಿಟಲ್ ವಾಲೆಟ್ಗಳಿಗೆ ವರ್ಗಾವಣೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಈ ರೀತಿಯ ವರ್ಗಾವಣೆ ಮಾಡಿರುವುದರಿಂದ ಆರೋಪಿಗಳಿಗೆ ಹೆಚ್ಚಿನ ಲಾಭಾಂಶ ದೊರೆತಿರುವ ಮಾಹಿತಿಯನ್ನು ಕಲೆಹಾಕಿರುವ ಪೊಲೀಸರು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ಸಿ.ಇ.ಎನ್ ಪೊಲೀಸರು ಆರೋಪಿತರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕಲೆಹಾಕಿದ್ದು, ಒಬ್ಬ ಬ್ಯಾಂಕ್ ಖಾತೆದಾರನನ್ನು ಠಾಣೆಗೆ ಕರೆದು ವಿಚಾರಣೆ ಮಾಡಿದಾಗ ಈತ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ.
ಈ ವಿದ್ಯಾರ್ಥಿಗೆ ರಾಜಸ್ತಾನ ಮೂಲದ ವ್ಯಕ್ತಿಗಳು, ಕರೆನ್ಸಿ ಎಕ್‌್ಸಚೇಜ್ ಮಾಡಲು ಬ್ಯಾಂಕ್ ಖಾತೆಗಳ ಅವಶ್ಯಕತೆಯಿದ್ದು, ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟಲ್ಲಿ ನಿಮಗೆ ಲಾಭಾಂಶವನ್ನು ಕೊಡುವುದಾಗಿ ಅಮಿಷವೊಡ್ಡಿ ಬ್ಯಾಂಕ್ ಖಾತೆಯನ್ನು ತೆರೆಸಿದ್ದಾರೆ.
ಇದೇ ರೀತಿ ಹಲವಾರು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ ನಂತರ ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಯ ಪಾಸ್ಬುಕ್, ಚೆಕ್ಬುಕ್, ಎಟಿಎಂ ಕಾರ್ಡ್ ಹಾಗೂ ಖಾತೆ ತೆರೆಯಲು ಬಳಸಿದ ಮೊಬೈಲ್ ಸಿಮ್ಕಾರ್ಡ್ನ್ನು ಆರೋಪಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಖಾತೆದಾರರಿಂದ ರಾಜಸ್ತಾನ ಹಾಗೂ ಇತರೆ ರಾಜ್ಯಗಳ ವ್ಯಕ್ತಿಗಳಿಂದ ಈ ರೀತಿ ಬ್ಯಾಂಕ್ ಖಾತೆ ತೆರೆಸಿದವರ ಮೊಬೈಲ್ ನಂಬರ್ಗಳನ್ನು ನೀಡಿದ್ದು, ಈ ನಂಬರ್ಗಳ ಮೂಲಕ ತಾಂತ್ರಿಕ ಸಹಾಯದಿಂದ ಇಬ್ಬರು ವ್ಯಕ್ತಿಗಳು ರಾಜಸ್ತಾನದಲ್ಲಿ ಮತ್ತು ಇಬ್ಬರು ವ್ಯಕ್ತಿಗಳು ನಗರದಲ್ಲಿ ನೆಲೆಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ತನಿಖಾಧಿಕಾರಿಗಳ ಒಂದು ತಂಡ ರಾಜಸ್ತಾನಕ್ಕೆ ಹೋಗಿ, ಬ್ಯಾಂಕ್ ಖಾತೆಯನ್ನು ತೆರೆಸಿದ ಇಬ್ಬರು ವಂಚಕರನ್ನು ಪತ್ತೆ ಮಾಡಿ ನಗರಕ್ಕೆ ಕರೆತಂದು ವಿಚಾರಣೆಗೊಳಪಡಿಸಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ.
ತನಿಖೆಯನ್ನು ಮುಂದುವರೆಸಿದಾಗ ಮತ್ತಿಬ್ಬರು ವಂಚಕರು ಬೊಮನಹಳ್ಳಿಯಲ್ಲಿರುವ ಪದಾವತಿ ಪಿಜಿಯಲ್ಲಿರುವ ಮಾಹಿತಿ ಕಲೆಹಾಕಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ವಿದ್ಯಾರ್ಥಿಗಳಿಂದ ಇನ್ನೂ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆಸುವ ಸಲುವಾಗಿ ನಗರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಈ ನಾಲ್ವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ರಾಜಸ್ತಾನದಲ್ಲಿ ನೆಲೆಸಿದ್ದ ಇಬ್ಬರು ಆರೋಪಿಗಳ ಮನೆಯಿಂದ 19 ಮೊಬೈಲ್ ಫೋನ್ಗಳು, 2 ಲ್ಯಾಪ್ಟಾಪ್ ಹಾಗೂ 20 ಸಿಮ್ ಕಾರ್ಡ್ಗಳನ್ನು ಹಾಗೂ ವಿದ್ಯಾರ್ಥಿಗಳಿಂದ ತೆರೆಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್ಬುಕ್ಗಳು, 106 ಕ್ರೆಡಿಟ್/ಡೆಬಿಟ್ ಕಾರ್ಡ್ಗಳು, 39 ಬ್ಯಾಂಕ್ ಚೆಕ್ ಬುಕ್ಗಳು ಹಾಗೂ 75 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ನಾಲ್ವರು ಆರೋಪಿಗಳ ವಿರುದ್ಧ ವಿವಿಧ 15 ರಾಜ್ಯಗಳಲ್ಲಿ 43 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ, ಸಿಇಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಡಾ.ಗೋವರ್ಧನ್ ಗೋಪಾಲ್, ಇನ್‌್ಸಪೆಕ್ಟರ್ ಈಶ್ವರಿ ಹಾಗೂ ಸಿಬ್ಬಂದಿಗಳ ತಂಡ ಕೈಗೊಂಡಿತ್ತು.