Thursday, January 9, 2025
Homeರಾಷ್ಟ್ರೀಯ | Nationalಕೆಎಸ್‌‍ಆರ್‌ಟಿಸಿ ಬಸ್‌‍ - ಕ್ಯಾಂಟರ್‌ ನಡುವೆ ಡಿಕ್ಕಿ : ಸ್ಥಳದಲ್ಲೇ ನಾಲ್ವರು ಸಾವು

ಕೆಎಸ್‌‍ಆರ್‌ಟಿಸಿ ಬಸ್‌‍ – ಕ್ಯಾಂಟರ್‌ ನಡುವೆ ಡಿಕ್ಕಿ : ಸ್ಥಳದಲ್ಲೇ ನಾಲ್ವರು ಸಾವು

ಕೋಲಾರ,ಜ.9- ಕೆಎಸ್‌‍ಆರ್‌ಟಿಸಿ ಬಸ್‌‍ ಹಾಗೂ ಕ್ಯಾಂಟರ್‌ ನಡುವೆ ತಮಿಳುನಾಡಿನ ರಾಣಿ ಪೇಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಶ್ರೀನಿವಾಸ್‌‍ ಪುರದ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ಕೋಲಾರ ಜಿಲ್ಲೆ ಶ್ರೀನಿವಾಸ್‌‍ಪುರ ತಾಲ್ಲೂಕಿನ ಸೀಗೆಹಳ್ಳಿ ನಿವಾಸಿಗಳಾದ ಕ್ಯಾಂಟರ್‌ ಚಾಲಕ ಮುಂಜುನಾಥ, ಕ್ಲೀನರ್‌ ಶಂಕರ್‌, ಸಹಾಯಕ ಸೋಮಶೇಖರ್‌ ಹಾಗೂ ವೆಂಕಟೇಶನಗರ ಗ್ರಾಮದ ರೈತ ಕೃಷ್ಣಪ್ಪ ಮೃತಪಟ್ಟ ದುರ್ದೈವಿಗಳು. ಈ ನಾಲ್ವರು ಸೀಗೆಹಳ್ಳಿಯಿಂದ ತರಕಾರಿಯನ್ನು ಕ್ಯಾಂಟರ್‌ನಲ್ಲಿ ತುಂಬಿಕೊಂಡು ಚೆನ್ನೈಗೆ ಹೋಗುತ್ತಿದ್ದರು.

ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ನಲ್ಲೂರು ಗ್ರಾಮದಿಂದ ಕೆಎಸ್‌‍ಆರ್‌ಟಿಸಿ ಸಾರಿಗೆ ಬಸ್‌‍ನಲ್ಲಿ 50 ಮಂದಿ ಗ್ರಾಮಸ್ಥರು ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಪ್ರವಾಸ ಹೋಗಿದ್ದು, ದೇವಿ ದರ್ಶನ ಮುಗಿಸಿಕೊಂಡು ತಡರಾತ್ರಿ ವಾಪಾಸ್‌‍ ಬರುತ್ತಿದ್ದರು. ಇಂದು ಬೆಳಗಿನ ಜಾವ ತಮಿಳುನಾಡಿನ ರಾಣಿ ಪೇಟೆ ಬಳಿ ಸೀಗೆಹಳ್ಳಿಯಿಂದ ಹೋಗಿದ್ದ ಕ್ಯಾಂಟರ್‌ ಹಾಗೂ ಕೆಎಸ್‌‍ಆರ್‌ಟಿಸಿ ಬಸ್‌‍ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ನೆರ್ಲ ಹಳ್ಳಿ ನಿವಾಸಿ ಬಾಬು, ನಲ್ಲೂರು ಗ್ರಾಮದ ಸರಸ್ವತಿ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸುದ್ದಿ ತಿಳಿದು ರಾಣಿ ಪೇಟೆ ಪೊಲೀಸರು ಹಾಗೂ ಆ್ಯಂಬುಲೆನ್‌್ಸ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ತಕ್ಷಣ ವೇಲೂರು ಸಿಎಂಸಿ ಆಸ್ಪತ್ರೆ ಹಾಗೂ ರತ್ನಗಿರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್‌‍ನಲ್ಲಿದ್ದ ಹಲವಾರು ಪ್ರವಾಸಿಗರು ಸಣ್ಣಪುಟ್ಟ ಗಾಯಾಗೊಂಡಿದ್ದು, ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಸೀಗೆಹಳ್ಳಿಯ ರೈತ ಕೃಷ್ಣಪ್ಪ ಅವರು ಬೆಳದಿದ್ದ ತರಕಾರಿಯನ್ನು ಚೆನ್ನೈಗೆ ಬೇಗ ತಲುಪಿಸಿದರೆ ಒಳ್ಳೆಯ ಬೆಲೆ ಸಿಗುತ್ತದೆಂದು ರಾತ್ರಿಯೇ ಕೋಲಾರದಿಂದ ಕ್ಯಾಂಟರ್‌ನಲ್ಲಿ ತೆರಳುತ್ತಿದ್ದಾಗ ಮುಳುಬಾಗಿಲಿನಿಂದ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ಕೆಸ್‌‍ಆರ್‌ಟಿಸಿ ನಡುವೆ ಭೀಕರ ಅಪಘಾತದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ದುರಂತವೆಂದರೆ ಈ ಎರಡೂ ವಾಹನಗಳು ಕೋಲಾರ ಜಿಲ್ಲೆಗೆ ಸೇರಿದವುಗಳಾಗಿವೆ ಎಂಬುದು ವಿಷಾದಕರ. ರಾಣಿ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News