Saturday, April 26, 2025
Homeರಾಷ್ಟ್ರೀಯ | Nationalಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಉಚಿತ ಶಿಕ್ಷಣ

ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಉಚಿತ ಶಿಕ್ಷಣ

Free education for families of those killed in Pahalgam attack

ನವದೆಹಲಿ,ಏ.25- ಇಡೀ ಮನುಕುಲವನ್ನೇ ಮೊಮ್ಮಲ ಮರುಗುವಂತೆ ಮಾಡಿದ ಪಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಉಚಿತವಾಗಿ ಶಿಕ್ಷಣ ನೀಡಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.ಗುಜರಾತ್‌ನ ಸೂರತ್‌ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಸವಾನಿ ಅವರು ಪಹಲ್ಗಾಮ್‌ ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬದವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳು ಎಲ್ಲಿಯ ತನಕ ಓದಲು ಇಚ್ಛೆ ಪಡುತ್ತಾರೋ ಅಲ್ಲಿಯ ತನಕ ನನ್ನ ಸ್ವಂತ ದುಡ್ಡಿನಲ್ಲಿ ಶಿಕ್ಷಣ ಕೊಡಿಸುತ್ತೇನೆ.ಘಟನೆಯಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಯರು, ತಾಯಂದಿರು ಆತಂಕಪಡಬಾರದು. ನಿಮ್ಮ ಕುಟುಂಬದ ಜವಾಬ್ದಾರಿ ನನಗೆ ಇರಲಿ ಎಂದು ಮಹೇಶ್‌ ಸವಾನಿ ಅಭಯ ನೀಡಿದ್ದಾರೆ.

ಯಾವುದೇ ರಾಜ್ಯದವರಾಗಿರಲಿ ಅದು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವರಾಗಿರಲಿ ನಿಮ್ಮ ಮಕ್ಕಳನ್ನು ಓದಿಸಿ ದೊಡ್ಡವರಾಗಬೇಕೆಂಬ ಇಚ್ಛೆ ಹೊಂದಿದ್ದರೆ ದಯಮಾಡಿ ನನ್ನನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.ಸಾಮಾಜಿಕ ಕಾರ್ಯಕರ್ತ ಹಾಗೂ ಕೈಗಾರಿಕೋ ದ್ಯಮಿಯಾಗಿರುವ ಸವಾನಿ ಸಾವಿರಾರು ಕೋಟಿ ರೂ.ಗಳ ಒಡೆಯ. ಪಹಲ್ಗಾಮ್‌ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವವರ ಕುಟುಂಬದವರ ಜೊತೆ ನಾನು ನಿಲ್ಲುತ್ತೇನೆ.

ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಯೋಚನೆ ಮಾಡಬೇಡಿ. ನೀವು ನನ್ನ ಹತ್ತಿರ ಬರುವ ಅಗತ್ಯವಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕುರಿತು ವಿವರಗಳನ್ನು ನೀಡಿ. ಕಾಲೇಜು ಆಡಳಿತ ಮಂಡಳಿಯೊಂದಿಗೆ ನಾನು ಮಾತನಾಡಿ ಅವರ ವಾರ್ಷಿಕ ಶುಲ್ಕ, ವಸತಿ ವೆಚ್ಚ ಎಲ್ಲವನ್ನು ಭರಿಸುತ್ತೇನೆ. ತಂದೆ ಇಲ್ಲ ಎಂಬ ಕೊರಗು ಮಕ್ಕಳಿಗೆ ಕಾಡಬಾರದು. ನೀವು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದನ್ನಷ್ಟೇ ಯೋಚಿಸಿ. ನನ್ನ ಪ್ರೀತಿಪಾತ್ರರ ಸಹೋದರಿಯರ ಜೊತೆ ನಾನು ಇರುತ್ತೇನೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News