Friday, March 14, 2025
Homeರಾಜ್ಯ1032 ಔಷಧಿಗಳ ಉಚಿತ ಪೂರೈಕೆಗೆ ಕ್ರಮ : ದಿನೇಶ್‌ ಗುಂಡೂರಾವ್‌

1032 ಔಷಧಿಗಳ ಉಚಿತ ಪೂರೈಕೆಗೆ ಕ್ರಮ : ದಿನೇಶ್‌ ಗುಂಡೂರಾವ್‌

free supply of 1032 medicines: Dinesh Gundu Rao

ಬೆಂಗಳೂರು,ಮಾ.13– ರಾಜ್ಯದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ 1,032 ಔಷಧಿಗಳನ್ನು ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಪ್ರಶ್ನೆ ಕೇಳಿ, ರಾಜ್ಯಸರ್ಕಾರ ನಿಯಮಾನುಸಾರ 761 ಔಷಧಿಗಳು ಲಭ್ಯವಿರಬೇಕಿತ್ತು. ಆದರೆ ವಾಸ್ತವವಾಗಿ 231 ಮಾತ್ರ ಇದೆ.

ನಾಲ್ಕು ವರ್ಷಗಳಿಂದಲೂ ಔಷಧಿ ಖರೀದಿಗೆ ಟೆಂಡರ್‌ ಆಗಿಲ್ಲ. ರಾಷ್ಟ್ರೀಯ ಆರೋಗ್ಯ ಕಾರ್ಯ ಯೋಜನೆಯಡಿ 2024-25ನೇ ಸಾಲಿಗೆ 157 ಕೋಟಿ ರೂ.ಗಳನ್ನು ಉಚಿತ ಔಷಧಿಗಳ ಸರಬರಾಜಿಗಾಗಿ ಮೀಸಲಿಡಲಾಗಿದೆ. ಅದರಲ್ಲಿ ಡಿಸೆಂಬರ್‌ವರೆಗೆ 5.5 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದ್ದು, ಇದು ಶೇ.3.5 ರಷ್ಟು ಸಾಧನೆಯಾಗಿದೆ.

ಕೆಳಹಂತದಲ್ಲಿ ಔಷಧಿಗಳ ಖರೀದಿಗೂ ಸರಿಯಾಗಿ ಅವಕಾಶ ನೀಡುತ್ತಿಲ್ಲ. ಒಂದೆಡೆ ವೈದ್ಯರು ಹೊರಗಡೆ ಔಷಧಿ ಖರೀದಿಸಲು ಚೀಟಿ ಬರೆದುಕೊಟ್ಟರೆ ಅವರನ್ನು ಅಮಾನತು ಮಾಡಲಾಗುತ್ತಿದೆ. ಸರ್ಕಾರವು ಔಷಧಿಗಳನ್ನು ಪೂರೈಸುತ್ತಿಲ್ಲ. ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನವೂ ಖರ್ಚಾಗುತ್ತಿಲ್ಲ.

ನಕಲಿ ಔಷಧಿಗಳ ಜಾಲ ರಾಜಾರೋಷವಾಗಿ ನಡೆಯುತ್ತಿದೆ. ಇದರ ಪರಿಶೀಲನೆಗಾಗಿ ಸಿಬ್ಬಂದಿಗಳ ಕೊರತೆ ಇದೆ. ಔಷಧಿ ಪರಿವೀಕ್ಷಕರ 114 ಹುದ್ದೆಗಳ ಪೈಕಿ 8 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. 27 ಸಾವಿರ ಔಷಧಿ ಕಂಪನಿಗಳಿದ್ದು ಅವುಗಳನ್ನು ಪರಿಶೀಲನೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಸರ್ಕಾರ ಪೂರೈಸುವ ಔಷಧಿಗಳ ಸಾಮರ್ಥ್ಯ ಶೇ.10 ರಷ್ಟು ಮಾತ್ರ ಎನ್ನಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಔಷಧಿಗಳ ಗುಣಮಟ್ಟಗಳಿಗೆ ಪ್ರಯೋಗಾಲಯಗಳಿಲ್ಲ. ನಕಲಿ ಔಷಧಿಗಳನ್ನು ಪೂರೈಸಿದವರ ವಿರುದ್ಧ ಈವರೆಗೆ ಯಾವುದೇ ಶಿಸ್ತು ಕ್ರಮಗಳಾಗಿಲ್ಲ ಎಂದು ಸುದೀರ್ಘ ವಿವರಣೆ ನೀಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಆರೋಗ್ಯ ಇಲಾಖೆಯಲ್ಲಿ ಜೀವನಾವಶ್ಯಕ ಮತ್ತು ಅಪಕ್ಷೇಣೀಯ ಎಂಬ 2 ವಿಧಗಳಲ್ಲಿ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಜೀವನಾವಶ್ಯಕವಾದ 408 ಮಾದರಿಯ ಔಷಧಿಗಳ ಪೈಕಿ 262 ಖರೀದಿಗೆ ಅಪೇಕ್ಷಣೀಯ, 324 ಔಷಧಿಗಳ ಪೈಕಿ 213 ಔಷಧಿಗಳ ಖರೀದಿಗೆ ಅನುಮತಿ ನೀಡಲಾಗಿದ್ದು, ಒಟ್ಟು 475 ಔಷಧಿಗಳನ್ನು ಖರೀದಿಸಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ 344 ಔಷಧಿಗಳ ದಾಸ್ತಾನಿದೆ.

ಕೆಲವು ಔಷಧಿಗಳನ್ನು ಖರೀದಿಸಲು ಟೆಂಡರ್‌ ಕರೆದರೆ ಗುತ್ತಿಗೆದಾರರು ಔಷಧಿ ಪೂರೈಸಲು ಮುಂದೆ ಬರುತ್ತಿಲ್ಲ. ಬೆಲೆ ಕಡಿಮೆ ಎಂಬ ಕಾರಣಕ್ಕಾಗಿ ಹಿಂದೇಟು ಹಾಕುತ್ತಿದ್ದಾರೆ. ಕೆಳಹಂತದಲ್ಲಿ ಎಆರ್‌ಕೆ, ಎಬಿಆರ್‌ಎಸ್‌‍ ಮಾದರಿಗಳಲ್ಲಿ ಔಷಧಿ ಖರೀದಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಕೇಂದ್ರ ಸರ್ಕಾರದ ಅನುದಾನದಲ್ಲಿ ಶೇ.80 ರಷ್ಟನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಸಂಸ್ಥೆಗೆ ಹಂಚಿಕೆಯಾಗುತ್ತಿದ್ದು, ಶೇ.20 ರಷ್ಟನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ನೀಡಿ ಎಬಿಎಆರ್‌ಕೆ, ಎಆರ್‌ಎಸ್‌‍, ಎನ್‌ಎಫ್‌ಡಿಎಸ್‌‍ ಮತ್ತು 15ನೇ ಹಣಕಾಸು ಯೋಜನೆಯಡಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಈವರೆಗೂ 732 ಔಷಧಿಗಳ ಖರೀದಿಗೆ ಮಾತ್ರ ಅವಕಾಶ ಇತ್ತು. ಅದನ್ನು 1,032 ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಔಷಧಿಗಳ ಬೇಡಿಕೆ ಆಧರಿಸಿ ಮಾದರಿಗಳನ್ನು ಬದಲಾವಣೆ ಮಾಡಲಾಗುವುದು. ಶೀಘ್ರವೇ ಔಷಧಿ ಖರೀದಿಸಿ ಆಸ್ಪತ್ರೆಗಳಿಗೆ ಪೂರೈಸುವ ಮೂಲಕ ಸರ್ಕಾರ ತನ್ನ ಮೂಲಭೂತ ಕರ್ತವ್ಯಕ್ಕೆ ಬದ್ಧವಾಗಿರಲಿದೆ ಎಂದರು.

ನಕಲಿ ಔಷಧಿ ವಿಭಾಗದಲ್ಲಿ 4 ವಿಧಗಳಿವೆ. ತಪ್ಪಾಗಿ ಹೆಸರನ್ನು ನಮೂದಿಸುವುದು ಒಂದು ವಿಧವಾದರೆ, ಉತ್ಪಾದಕರು ಬೇರೆ, ಔಷಧಿಗಳಿಗೆ ಅಂಟಿಸುವ ಲೇಬಲ್‌ನಲ್ಲಿ ಬೇರೆ ಹೆಸರಿರುವುದು, ಲೇಬಲ್‌ಗಳಲ್ಲಿನ ತಪ್ಪು ಮಾಹಿತಿ ಹಾಗೂ ಔಷಧಿ ಗುಣಮಟ್ಟ ಆಧರಿಸಿ ಬೇರೆಬೇರೆ ರೀತಿಯ ವಿಧಗಳಿವೆ.

ರಾಜ್ಯಸರ್ಕಾರ ಈವರೆಗಿನ ಇತಿಹಾಸದಲ್ಲೇ ಅತಿ ಹೆಚ್ಚು ತಪಾಸಣೆಗಳನ್ನು ಕೈಗೊಂಡಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 67 ಔಷಧಿ ಪರಿವೀಕ್ಷಕರ ನೇಮಕಾತಿಗಾಗಿ ಕ್ರಮ ಕೈಗೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ತಗಾದೆ ಇತ್ಯರ್ಥವಾದ ತಕ್ಷಣ ನೇಮಕಾತಿ ಆದೇಶ ನೀಡುವುದಾಗಿ ತಿಳಿಸಿದರು.

ನಕಲಿ ಔಷಧಿ ವಿಚಾರಕ್ಕೆ ಸಂಬಂಧಪಟ್ಟಂತೆ 87 ಫಾರ್ಮಸಿ ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ, 3 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಕೆಎಸ್‌‍ಎಂಎಸ್‌‍ಸಿಎಲ್‌ಗೆ ಐಎಎಸ್‌‍ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಸಾಕಷ್ಟು ಸುಧಾರಣೆ ತರಲಾಗುತ್ತಿದೆ ಎಂದು ವಿವರಿಸಿದರು.
ಟೆಂಡರ್‌ ನಿಯಮಾವಳಿಗಳಲ್ಲೂ ಸರಳೀಕರಣ ಮಾಡಲಾಗುತ್ತಿದೆ. ಆಹಾರ ಮತ್ತು ಔಷಧಿಗಳ ವಿಭಾಗದಲ್ಲಿ ಹೆಚ್ಚು ಕಾಳಜಿ ವಹಿಸಲಾಗುತ್ತಿದೆ ಎಂದರು.

ಆದರೆ ಈ ಉತ್ತರ ಒಪ್ಪದ ಅಶ್ವತ್ಥನಾರಾಯಣರವರು, ಆರೋಗ್ಯ ಇಲಾಖೆ ಅನಾರೋಗ್ಯಕ್ಕೆ ಒಳಗಾಗಿದೆ. ಜನರಿಗೆ ಸರಿಯಾಗಿ ಔಷಧಿ ಪೂರೈಸುತ್ತಿಲ್ಲ ಎಂದು ಆರೋಪಿಸಿದರು.
ಈ ವರ್ಷ ಔಷಧಿ ಖರೀದಿಗೆ 989 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಔಷಧಿ ಲಭ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡರು.

RELATED ARTICLES

Latest News