ನವದೆಹಲಿ, ಅ 27:ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರುವ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಕೃತ್ಯಗಳಲ್ಲಿ ಸ್ಥಿರತೆ ಇದೆ. ಎಲ್ಲಿಗೆ ಹೋದರೂ ಭ್ರಷ್ಟಾಚಾರ ಮಾಡುತ್ತೇವೆ ಎಂಬುದು ಕಾಂಗ್ರೆಸ್‌ನ ಹೊಸ ಘೋಷಣೆಯಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಮಾನಾರ್ಥಕವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಎಂದು ಭಾಟಿಯಾ ಕಿಡಿಕಾಡಿದ್ದಾರೆ.
ಮುಡಾ ಹಗರಣ ಮತ್ತುವಾಲೀಕಿ ಅಭಿವೃದ್ಧಿ ನಿಗಮದ ಹಗರಣಗಳು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನ ಕೆಳಗೆ ನಡೆಯುವುದನ್ನು ನಾವು ನೋಡಿದ್ದೇವೆ. ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ ಐದು ಎಕರೆ ಜಮೀನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣ ಈಗ ಹೊರಬಿದ್ದಿದೆ ಎಂದು ಟೕಕಿಸಿದರು.
ನಿಯಮಗಳನ್ನು ಉಲ್ಲಂಘಿಸಿ ಖರ್ಗೆ ಕುಟುಂಬ ನಡೆಸುತ್ತಿರುವ ಟ್ರಸ್ಟ್‌ಗೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ, ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ, ಅವರ ಅಳಿಯ ಸಂಸದ ರಾಧಾಕೃಷ್ಣ ಮತ್ತು ಪುತ್ರರಾದ ಪ್ರಿಯಾಂಕ್ ಖರ್ಗೆ ಮತ್ತು ರಾಹುಲ್ ಟ್ರಸ್ಟ್‌ನಲ್ಲಿದ್ದಾರೆ ಎಂದು ದೂರಿದರು.
ಮಾಹಿತಿಯ ಪ್ರಕಾರ, ಹಲವಾರು ಕಂಪನಿಗಳು ಮತ್ತು ಸಂಸ್ಥೆಗಳು ಭೂಮಿಗಾಗಿ ಅರ್ಜಿಯನ್ನು ನೀಡಿದ್ದವು ಆದರೆ ಅದನ್ನುಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸಿ ಖರ್ಗೆ ಕುಟುಂಬ ನಡೆಸುವ ಟ್ರಸ್ಟ್‌ಗೆ ಭೂಮಿ ಹಂಚಲಾಗಿದೆ ಎಂದು ಭಾಟಿಯಾ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದ್ದಾರೆ. ಸತ್ಯವನ್ನು ಕಂಡುಹಿಡಿಯಲು ಸ್ವತಂತ್ರ ಸಂಸ್ಥೆ ಸಿಬಿಐನಿಂದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿಯನ್ನು ಖರ್ಗೆ ಅವರ ಕುಟುಂಬದವರು ನಡೆಸುತ್ತಿರುವ ಟ್ರಸ್ಟ್‌ಗೆ ಹಂಚಿಕೆ ಮಾಡಿರುವುದನ್ನು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯರೂ ಆಗಿರುವ ಲಹರ್ ಸಿಂಗ್ ಸಿರೋಯಾ ಪ್ರಶ್ನಿಸಿದ್ದರು ಮತ್ತು ಅವರು ಭೂಮಿಗೆ ಅರ್ಹರಾಗಲು ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು ಎಂದು ಕೇಳಿದ್ದರು. .