ನವದೆಹಲಿ, ಜ.26: ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಜಸ್ಥಾನದಲ್ಲಿ ಉಗ್ರರು ಭಾರಿ ದುಷ್ಕೃತ್ಯ ನಡೆಸಲು ರೂಪಿಸಿದ್ದ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಕಾರ್ಯಚರಣೆ ಎಂದು ಹೇಳಲಾಗಿದೆ.
ಸುಮಾರು 10,000 ಕೆಜಿ (9,550 ಕೆಜಿ ನಿಖರವಾಗಿ) ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೋನಿಯಂ ನೈಟ್ರೇಟ್ನೊಂದಿಗೆ ದೊಡ್ಡ ಪ್ರಮಾಣದ ಡೆಟೋನೇಟರ್ಗಳು, ಫ್ಯೂಸ್ ವೈರ್ಗಳು ಮತ್ತು ಇತರ ಸ್ಫೋಟಕ ಸಾಮಗ್ರಿಗಳನ್ನು ಹೊಂದಿದ್ದ 187 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗೌರ್ ಜಿಲ್ಲೆಯ ಹರ್ಸೋರ್ ಗ್ರಾಮದ ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ಹೌಸ್ ಮೇಲೆ ಜಿಲ್ಲಾ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ ಈ ಸ್ಫೋಟಕಗಳು ಸಿಕ್ಕಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೇಮಾನ್ ಖಾನ್ (50) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈತ ಹರ್ಸೋರ್ ಗ್ರಾಮದ ನಿವಾಸಿಯಾಗಿದ್ದು, ಇವನ ವಿರುದ್ಧ ಈಗಾಗಲೇ ಸ್ಫೋಟಕ ಕಾಯ್ದೆಯಡಿ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಯು ಈ ಸ್ಫೋಟಕಗಳನ್ನು ಅಕ್ರಮ ಗಣಿಗಾರಿಕೆ ಉದ್ದೇಶಕ್ಕಾಗಿ ಪೂರೈಸಲು ಸಂಗ್ರಹಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.
ಗಣರಾಜ್ಯೋತ್ಸವದ ಮುನ್ನಾದಿನ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಸಿಕ್ಕಿರುವುದು ಭದ್ರತಾ ದೃಷ್ಟಿಯಿಂದ ಗಂಭೀರ ಪ್ರಕರಣ ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ (ನವೆಂಬರ್ 2025) ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದ ಮಾದರಿಯಲ್ಲೇ ಈ ಸ್ಫೋಟಕಗಳೂ ಇರುವುದರಿಂದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪ್ರಕರಣದ ಗಂಭೀರತೆ ಅರಿತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಪ್ರಕರಣದ ಗಂಭೀರತೆ ಮತ್ತು ಸ್ಫೋಟಕಗಳ ಬೃಹತ್ ಪ್ರಮಾಣವನ್ನು ಗಮನಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇಂಟೆಲಿಜೆನ್್ಸ ಬ್ಯೂರೋ ಈಗಾಗಲೇ ತನಿಖೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ.
ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಸ್ಫೋಟದಲ್ಲಿ ಬಳಸಲಾಗಿದ್ದ ಅದೇ ಮಾದರಿಯ ಅಮೋನಿಯಂ ನೈಟ್ರೇಟ್ ಮತ್ತು ಡೆಟೋನೇಟರ್ಗಳು ಇಲ್ಲಿಯೂ ಸಿಕ್ಕಿರುವುದರಿಂದ, ಇವೆರಡಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಸ್ಫೋಟಕಗಳ ವಶದ ನಂತರ ದೇಶಾದ್ಯಂತ, ವಿಶೇಷವಾಗಿ ದೆಹಲಿ ಮತ್ತು ರಾಜಸ್ಥಾನದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಸುಲೇಮಾನ್ ಖಾನ್ ನಾಗೌರ್ ಜಿಲ್ಲೆಯ ಹರ್ಸೋರ್ ಗ್ರಾಮದ ನಿವಾಸಿಯಾಗಿದ್ದು ಮೇಲ್ನೋಟಕ್ಕೆ ಈತ ಕೃಷಿ ಮತ್ತು ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ಮೇಲೆ ಈ ಹಿಂದೆ ಸ್ಫೋಟಕ ಕಾಯ್ದೆಯಡಿ ಮೂರು ಪ್ರಕರಣಗಳು ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ಈತ ಖುಲಾಸೆಗೊಂಡಿದ್ದರೂ, ಉಳಿದ ಪ್ರಕರಣಗಳು ಈತನಿಗೆ ಸ್ಫೋಟಕಗಳ ಅಕ್ರಮ ವ್ಯವಹಾರದಲ್ಲಿ ದೀರ್ಘಕಾಲದ ನಂಟು ಇರುವ ಬಗ್ಗೆ ಹೇಳಲಾಗಿದೆ.
