ಚಿತ್ರದುರ್ಗ,ಜ.11- ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ ನಾಲ್ವರು ಯುವಕರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಹಿರಿಯೂರು ತಾಲ್ಲೂಕಿನ ಹಿಂಡಸಗಟ್ಟೆ ಗ್ರಾಮದ ಬಳಿ ರಾತ್ರಿ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ಗ್ರಾಮದ ವಿಶ್ವನಾಥ(22), ನಂಜುಂಡಿ(23), ರಾಹುಲ್(23), ಯಶವಂತ್(22) ಎಂದು ಗುರುತಿಸಲಾಗಿದೆ. ಮಾರುತಿ ಸ್ವಿಫ್್ಟ ಕಾರಿನಲ್ಲಿ ಹುಳಿಯಾರಿನಿಂದ ಹಿರಿಯೂರಿಗೆ ಬರುವಾಗ ರಾಜ್ಯ ಹೆದ್ದಾರಿ 150ರಲ್ಲಿ ಜವರಾಯನ ರೂಪದಲ್ಲಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲೇ ಬಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿರಿಯೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಆನಂದ್ ಮತ್ತು ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜಖಂಗೊಂಡ ವಾಹನಗಳನ್ನು ರಸ್ತೆ ಪಕ್ಕ ಸರಿಸಿ ಸಾಲುಗಟ್ಟಿ ನಿಂತಿದ್ದ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಮತ್ತೊಂದು ಅಪಘಾತ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಮಟಕಲ್ಲು ಗ್ರಾಮದ ಸೇತುವೆ ಬಳಿ ಸಂಭವಿಸಿದೆ. ದುರಂತದಲ್ಲಿ ಕಾರು- ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಜಾನೆ 3.30ರಲ್ಲಿ ಸಂಭವಿಸಿದೆ.
ಮೃತರನ್ನು ಡಿವೈಎಸ್ಪಿ ವೈಷ್ಣವಿ ಅವರ ತಾಯಿ ಕಮಲಾ ಹರಿಬಾಬು(55) ಹಾಗೂ ಚಾಲಕ ರಾಕೇಶ್(40) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದ ಎಸಿಬಿಯ ಡಿವೈಎಸ್ಪಿ ವೈಷ್ಣವಿ ಅವರು ತಮ ಇನ್ನೋವಾ ಕಾರಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.
ಕಾರನ್ನು ಚಾಲನೆ ಮಾಡುತ್ತಿದ್ದ ರಾಕೇಶ್ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಭಾರೀ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೈಷ್ಣವಿ ಅವರ ಚಿಕ್ಕಮ ಕುಸುಮ, ಪೊಲೀಸ್ ಕಾನ್ಸ್ಟೆಬಲ್ ಉದಯಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
