ಡಾಕಾ, ಡಿ.19- ಜುಲೈ ದಂಗೆಯ ಪ್ರಮುಖ ನಾಯಕ ಷರೀಫ್ ಉಸಾನ್ ಹಾದಿ ಅವರ ಮರಣದ ನಂತರ ಬಾಂಗ್ಲಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಲ್ಲಿನ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ದೇವದೂಷಣೆಯ ಆರೋಪದ ಮೇಲೆ ಹಿಂದೂ ವ್ಯಕ್ತಿಯೊಬ್ಬನನ್ನು ಗುಂಪೊಂದು ಹೊಡೆದು ಕೊಂದು ಹಾಕಿ ಶವವನ್ನು ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.
ಉದ್ರೀಕ್ತರ ಆಕ್ರೋಶಕ್ಕೆ ಗುರಿಯಾದ ಹಿಂದೂ ವ್ಯಕ್ತಿಯನ್ನು ದೀಪು ಚಂದ್ರ ದಾಸ್ ಎಂದು ಗುರುತಿಸಲಾಗಿದ್ದು, ಭಾಲುಕಾ ಉಪಜಿಲಾದ ದುಬಾಲಿಯಾ ಪಾರಾ ಪ್ರದೇಶದಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸ್ಥಳೀಯರ ಗುಂಪೊಂದು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ರಾತ್ರಿ 9 ಗಂಟೆ ಸುಮಾರಿಗೆ ಅವರ ಮೇಲೆ ಹಲ್ಲೆ ನಡೆಸಿತು, ಜನಸಮೂಹವು ದೀಪು ಚಂದ್ರ ದಾಸ್ ಅವರನ್ನು ಹೊಡೆದು ಕೊಂದು, ಅವರ ದೇಹವನ್ನು ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಶವವನ್ನು ವಶಪಡಿಸಿಕೊಂಡರು.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಮೆನ್ಸಿಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಬಲಿಪಶುವಿನ ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಔಪಚಾರಿಕ ದೂರು ದಾಖಲಾದ ನಂತರ ಕಾನೂನು ಕ್ರಮಗಳು ಪ್ರಾರಂಭವಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಗುಂಡಿನ ದಾಳಿಗೆ ಬಲಿಯಾದ ತೀವ್ರಗಾಮಿ ರಾಜಕೀಯ ಕಾರ್ಯಕರ್ತ ಮತ್ತು ಶರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಬಾಂಗ್ಲಾದೇಶದಲ್ಲಿ ದೇಶಾದ್ಯಂತ ನಡೆದ ಪ್ರತಿಭಟನೆಗಳು ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ ಗುಂಪು ಹಲ್ಲೆ ನಡೆದಿದೆ.
