Thursday, January 8, 2026
Homeರಾಜ್ಯಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿತ : ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ

ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿತ : ಪೊಲೀಸರ ವರ್ತನೆಗೆ ವ್ಯಾಪಕ ಆಕ್ರೋಶ

BJP worker stripped and beaten: outrage over police action

ಹುಬ್ಬಳ್ಳಿ, ಜ.7-ನಗರದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರೇ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರು ವುದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಡಲಾಗಿದೆ ಎಂದು ಪ್ರಶ್ನೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆಯೊಬ್ಬರ ವಿರುದ್ಧ ಕಾಂಗ್ರೆಸ್‌‍ನ ನಗರಸಭಾ ಸದಸ್ಯೆಯೊಬ್ಬರು ಪ್ರತಿಗಲಾಟೆ ಮಾಡಿದ್ದಾರೆ. ಸ್ಥಳೀಯರ ದೂರು ಆಧರಿಸಿ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸುವ ವೇಳೆ ಈ ದುರ್ಘಟನೆ ನಡೆದಿದೆ.

ಪೊಲೀಸರೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಆರೋಪವನ್ನು ತಳ್ಳಿ ಹಾಕಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌‍ ಆಯುಕ್ತರಾದ ಶಶಿಕುಮಾರ್‌, ಸಂತ್ರಸ್ಥ ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರಿಂದಲೇ ಮಹಿಳೆಗೆ ಅಪಮಾನವಾಗಿದೆ ಎಂದು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿವೆ. ಘಟನೆಯ ಹೊಣೆ ಹೊತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗಷ್ಟೇ ಗಂಭೀರ ಕೊಲೆ ಪ್ರಕರಣಗಳು ವರದಿಯಾಗಿದ್ದವು. ಬ್ಯಾಂಕ್‌ ದರೋಡೆ, ಚಿನ್ನಾಭರಣ ಅಂಗಡಿಗಳ ಲೂಟಿ ಸೇರಿದಂತೆ ಅನೇಕ ಪ್ರಕರಣಗಳು ರಾಜ್ಯದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿವೆ.

ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣವೂ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಅದರ ಕಾವು ತಣ್ಣಗಾಗುವ ಮುನ್ನವೇ ಹುಬ್ಬಳ್ಳಿಯಲ್ಲಿ ಮಹಿಳೆಗೆ ಅಪಮಾನ ಮಾಡಿರುವುದು ಮತ್ತಷ್ಟು ಜನಾಕ್ರೋಶವನ್ನು ಹೆಚ್ಚಿಸಿದೆ.

ಘಟನೆ ಹಿನ್ನೆಲೆ: ಇತ್ತೀಚೆಗೆ ಕೇಶವಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ ಅಧಿಕಾರಿಗಳು ಲೋಪವೆಸಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತೆ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲಿಟ್‌ ಮಾಡಲಾಗಿದೆ ಎಂದು ಗಲಾಟೆ ಮಾಡಿದ್ದರು. ಅಲ್ಲಿಗೆ ಬಂದ ಕಾಂಗ್ರೆಸ್‌‍ನ ನಗರಸಭಾ ಸದಸ್ಯೆರೊಬ್ಬರು ಪ್ರತಿ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಸ್ಥಳೀಯವಾಗಿ ಕಾವೇರಿದ ವಾತಾವರಣ ನಿರ್ಮಿಸಿತ್ತು. ಕಾಂಗ್ರೆಸ್‌‍ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಗ್ಗ-ಜಗ್ಗಾಟ ನಡೆದಿತ್ತು. ಸ್ಥಳೀಯರಾದ ಪ್ರಶಾಂತ್‌ ಬೊಮಾಜ್ಜಿ ಎಂಬುವರು ನೀಡಿರುವ ದೂರು ಆಧರಿಸಿ ಈಗ ಬಂಧನಕ್ಕೆ ಒಳಗಾದ ಮಹಿಳೆ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆ ವೇಳೆ ಆಕೆ ಗಲಾಟೆ ಮಾಡಿ ಪ್ರತಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ. ಆಕೆಯನ್ನು ಬಂಧಿಸುವ ವೇಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸ್‌‍ ಆಯುಕ್ತ ಶಶಿಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌‍ ಆಯುಕ್ತಾಲಯ ವ್ಯಾಪ್ತಿಯ ಕೇಶವಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಮೀಕ್ಷೆಗಾಗಿ ಜನವರಿ 1ರಂದು ಅಧಿಕಾರಿಗಳು ಹೋಗಿದ್ದಾಗ ಸ್ಥಳೀಯವಾಗಿ ಒಂದಿಷ್ಟು ಗಲಾಟೆಗಳಾಗಿವೆ. ನಮ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ನಂತರ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಕಾರ್ಯಕರ್ತೆ ತನ್ನ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಲು ಯತ್ನಿಸಿದ್ದಾರೆ ಎಂದು ಪ್ರಶಾಂತ್‌ ಬೊಮಾಜ್ಜಿಯವರು ದೂರು ನೀಡಿದ್ದಾರೆ.

ಇದಕ್ಕೆ ವಿರುದ್ಧವಾಗಿ ಮಹಿಳೆ ತನ್ನ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಪ್ರಶಾಂತ್‌ ವಿರುದ್ಧ ಆರೋಪಿಸಿದ್ದಾರೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮಹಿಳೆಯನ್ನು ಬಂಧಿಸಿ ಡಿಎಆರ್‌ನ ಪೊಲೀಸ್‌‍ ವಾಹನದಲ್ಲಿ ಕೂರಿಸಿಕೊಳ್ಳುವ ಹಂತದಲ್ಲಿ ಆಕೆ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ತನ್ನ ಬಟ್ಟೆಯನ್ನು ಕಿತ್ತು ಎಸೆದಿದ್ದಾಳೆ. ಮಹಿಳಾ ಪಿಎಸ್‌‍ಐ ಮತ್ತು ಏಳೆಂಟು ಮಂದಿ ಮಹಿಳಾ ಪೊಲೀಸ್‌‍ ಸಿಬ್ಬಂದಿಗಳಿದ್ದಾಗ್ಯೂ ಆಕೆ ತಾನಾಗಿಯೇ ವಿವಸ್ತ್ರಗೊಂಡಿದ್ದಾಳೆ. ಪೊಲೀಸರು ಸ್ಥಳೀಯರ ಸಹಾಯದಲ್ಲಿ ಬೇರೆ ಬಟ್ಟೆಯನ್ನು ಆಕೆಗೆ ತೊಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆಕೆ ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ವಿವರಿಸಿದ್ಧಾರೆ.

ಘಟನೆಗೆ ಸಂಬಂಧಪಟ್ಟಂತೆ 3 ದೂರುಗಳು ದಾಖಲಾಗಿವೆ. ಬಂಧನದ ವೇಳೆ ಮಹಿಳೆ ನಾಲ್ಕು ಜನ ಮಹಿಳಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಕಲಾವತಿ ದಂಡಾವರ್ಕರ್‌, ಶಕುಂತಲಾ, ರೇಖಾ, ಮಾರ್ಗರೆಟ್‌ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮಹಿಳಾ ಸಿಬ್ಬಂದಿಗೆ ಕಚ್ಚಿದ್ದಾರೆ ಎಂದು ಹೇಳಿದ್ದಾರೆ. ಪುರುಷ ಸಿಬ್ಬಂದಿಗಳನ್ನು ತಳ್ಳಾಡಿ, ದಬ್ಬಿ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆಕೆ ವಿರುದ್ಧ ಈ ಮೊದಲು 9 ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದೆ. ಪ್ರಶಾಂತ್‌ ಬೊಮಾಜ್ಜಿ ನೀಡಿರುವ ದೂರು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.

ವಿವಸ್ತ್ರ ಪ್ರಕರಣ ತನಿಖೆಗೆ ಆದೇಶ
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಪೊಲೀಸರು ವಿವಸ್ತ್ರಗೊಳಿಸಿ ಥಳಿಸಿದ್ದಾರೆಂಬ ಆರೋಪದ ಬಗ್ಗೆ ಹುಬ್ಬಳ್ಳಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರು ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಹಿತೇಂದ್ರ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನಗರ ಪೊಲೀಸ್‌‍ ಆಯುಕ್ತರು ಈ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಆರೋಪಗಳು ಬಂದಿವೆ. ಆದ್ದರಿಂದ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.
ಒಂದು ವೇಳೆ ಪೊಲೀಸರು ತಪ್ಪು ಮಾಡಿದ್ದಾರೆ ಎಂಬುವುದು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿತೇಂದ್ರ ಅವರು ಹೇಳಿದರು.

RELATED ARTICLES

Latest News