ಮೈಸೂರು,ಜ.6- ಕೆಲವು ದಿನಗಳ ಹಿಂದಷ್ಟೇ ತುಮಕೂರು, ಹಾಸನ ಜಿಲ್ಲಾಧಿಕಾರಿ ಕಚೇರಿ ಹಾಗೂ ಸರಗೂರು ತಾಲ್ಲೂಕು ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬೆನ್ನಲ್ಲೇ ಇದೀಗ ಮೈಸೂರು ನ್ಯಾಯಾಲಯಕ್ಕೂ ಕೂಡ ಇಂದು ಬೆಳಗ್ಗೆ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಇಂದು ಬೆಳಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದು, ಈ ವೇಳೆ ನ್ಯಾಯಾಲಯದ ಇಮೇಲ್ ಪರಿಶೀಲಿಸುತ್ತಿದ್ದಾಗ ಬಾಂಬ್ ಬೆದರಿಕೆ ಸಂದೇಶ ಕಂಡುಬಂದಿದೆ. ಸಿಬ್ಬಂದಿಗಳು, ಅಧಿಕಾರಿಗಳು, ವಕೀಲರು, ನ್ಯಾಯಧೀಶರು, ನ್ಯಾಯಾಲಯದ ಕಟ್ಟಡದಿಂದ ಹೊರಬಂದಿದ್ದಾರೆ.
ಕೂಡಲೇ ಲಕ್ಷ್ಮಿಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಬಾಂಬ್ ಪತ್ತೆ ದಳ, ಶ್ವಾನದಳ ಹಾಗೂ ಪೊಲೀಸರು ನ್ಯಾಯಾಲಯದ ಆವರಣ ಹಾಗೂ ಕಟ್ಟಡದ ಒಳಗಡೆ ಪ್ರತಿ ರೂಮ್‌ನಲ್ಲೂ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.
ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲಿಯೂ ಕೂಡ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಸಂದೇಶ ಎಂದು ಗೊತ್ತಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
