ಬೆಳಗಾವಿ, ಡಿ.9- ನೀರಾವರಿ ಯೋಜನೆಗಳಲ್ಲಿ ಕೊನೆಯ ಭಾಗಕ್ಕೆ ನೀರು ತಲುಪಿಸಲು ಅಡ್ಡಿಯಾಗಿರುವ ಅನಧಿಕೃತ ಪಂಪ್ ಸೆಟ್‌ಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸುವುದಾಗಿ ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದಲ್ಲಿ ಆಡಳಿತ ಪಕ್ಷದ ಶಾಸಕ ಜಿ.ಟಿ.ಪಾಟೀಲ್ ಘಟಪ್ರಭಾ ನದಿಯ ಹಿಡಕಲ್ ಜಲಾಶಯದಿಂದ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ. ನಾಲೆಗಳನ್ನು ದುರಸ್ತಿ ಮಾಡಬೇಕಿದೆ, ಇನ್ನು ಎಷ್ಟು ವರ್ಷ ನಾವು ನೀರಿನಿಂದ ವಂಚಿತವಾಗಬೇಕು? ಸುಮಾರು 15 ಸಾವಿರ ಪಂಪ್ ಸೆಟ್‌ಗಳನ್ನು ಅಕ್ರಮವಾಗಿ ಅಳವಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉತ್ತರ ನೀಡಿದ ಡಿ.ಕೆ.ಶಿವಕುಮಾರ್ ಇದೊಂದು ಗಂಭೀರ ವಿಚಾರ, ಎಬಿಬಿಪಿ ಯೋಜನೆಯಡಿ ರೂ.2700 ಕೋಟಿ ರೂಪಾಯಿಗಳಲ್ಲಿ ನಾಲಾ ದುರಸ್ತಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಅಂಗೀಕಾರಗೊಂಡರೆ ನಾಲೆಗಳ ದುರಸ್ತಿಯಾಗುತ್ತದೆ ಎಂದರು.
ಎತ್ತಿನಹೊಳೆ ಯೋಜನೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀರಾವರಿ ಭಾಗದಲ್ಲಿನ ಪ್ರದೇಶದಲ್ಲಿ ನಾಲೆಗಳಿಗೆ ಅನಧಿಕೃತವಾಗಿ ಅಳವಡಿಸುವ ಪಂಪ್‌ಸೆಟ್‌ಗಳನ್ನು ತೆರವು ಮಾಡಲು ಯೋಜನೆ ರೂಪಿಸಿದ್ದೇವೆ. ಈಗಾಗಲೇ ಇದಕ್ಕೆ ತರಬೇತಿ ನೀಡಲಾಗುತ್ತಿದೆ. ಈ ಅಧಿವೇಶನದಲ್ಲಿ ಎಲ್ಲಾ ಶಾಸಕರು ಅನಧಿಕೃತವಾದ ಪಂಪ್ ಸೆಟ್ ಗಳನ್ನು ತೆರವು ಮಾಡಲು ಯೋಜನೆ ನಿರ್ಣಯ ಕೈಗೊಳ್ಳಬೇಕಿದೆ.
ಕಾವೇರಿ ನದಿ ಪಾತ್ರದಲ್ಲಿ ಪಾಂಡವಪುರದವರೇ ಎಲ್ಲಾ ನೀರು ಬಳಸಿಕೊಳ್ಳುತ್ತಾರೆ. ಮಳವಳ್ಳಿಗೆ ನೀರೇ ಇಲ್ಲ. ಕೊನೆಯ ಭಾಗಕ್ಕೆ ನೀರು ತಲುಪದೇ ಇದ್ದರೆ ಕಷ್ಟವಾಗುತ್ತ್ತದೆ. ಇದನ್ನು ಆಂದೋಲನದ ಮಾದರಿಯಲ್ಲಿ ತಡೆಯಬೇಕಿದೆ ಎಂದರು. ತುರುವೇಕೆರೆ ಕ್ಷೇತ್ರದ ಎಂ.ಟಿ.ಕೃಷ್ಣಪ್ಪ ನಾಲೆಗಳಿಗಾಗಿ ರೈತರು 70, 80 ಅಡಿ ಜಮೀನು ಕಳೆದುಕೊಂಡಿದ್ದಾರೆ. ಅವರಿಗೆ ನೀರು ಬಿಡ ಬೇಡವೇ ಎಂದು ಪ್ರಶ್ನಿಸಿದರು. ಅನಧಿಕೃತವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಅವಕಾಶ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.
