ಚಿಕ್ಕಮಗಳೂರು,ಡಿ.27- ಕ್ರಿಸ್‌ಮಸ್ ರಜೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಎಲ್ಲೆಲ್ಲೂ ಕಾರುಗಳದ್ದೇ ದರ್ಬಾರು ಕಂಡುಬರುತ್ತಿದೆ.ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದು, ಜೊತೆಗೆ ವರ್ಷಾಂತ್ಯವನ್ನು ಸಂಭ್ರಮದಿಂದ ಆಚರಿಸಲು ಜನರು ಪ್ರವಾಸಿತಾಣಗಳತ್ತ ಮುಖ ಮಾಡುತ್ತಿದ್ದಾರೆ.
ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ, ಬಾಳೆಹೊನ್ನೂರು, ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೆಮಣ್ಣುಗುಂಡಿ, ಕಲ್ಲತ್‌ಗಿರಿ, ದೇವಿರಮನಬೆಟ್ಟ, ಎತ್ತಿನಭುಜ, ಅಬ್ಬಿಫಾಲ್‌್ಸ, ಭದ್ರಾ ಅಭಯಾರಣ್ಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣ ಹಾಗೂ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದು, ಎಲ್ಲೆಲ್ಲೂ ವಾಹನಗಳ ಸಂಚಾರ ಜೋರಾಗಿದೆ.
ಶೃಂಗೇರಿಯ ಪಾರ್ಕಿಂಗ್ ಸ್ಥಳ ಬಹುತೇಕ ಕಾರುಗಳಿಂದ ತುಂಬಿ ತುಳುಕುತ್ತಿದೆ. ಅದೇ ರೀತಿ ಎಲ್ಲಾ ಪುಣ್ಯಸ್ಥಳ ಸೇರಿದಂತೆ ಪ್ರವಾಸಿತಾಣಗಳಲ್ಲಿ ಜನಜಂಗುಳಿ ಜೋರಾಗಿದೆ. ಹೋಟೆಲ್‌ಗಳು, ರೆಸಾರ್ಟ್‌ಗಳು, ಹೋಂಸ್ಟೇಗಳು ಕೂಡ ಭರ್ತಿಯಾಗಿದ್ದು, ಹೊಸ ವರ್ಷಾಚರಣೆಗೂ ಕೂಡ ಮುಂಗಡ ಬುಕ್ಕಿಂಗ್ ಭರದಿಂದ ನಡೆಯುತ್ತಿದೆ.
ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ರಾಜಧಾನಿ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.ಒಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ವರ್ಷಾಂತ್ಯದ ಸಂಭ್ರಮ ಜೋರಾಗಿದೆ.
ಕ್ರಿಸ್ಮಸ್‌ಹೊಸವರ್ಷದ ಸಂಭ್ರಮ : ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರೀ ವಾಹನ ದಟ್ಟಣೆ
ಕ್ರಿಸ್ಮಸ್ ರಜೆ ಹಾಗೂ ಹೊಸವರ್ಷದ ಹಬ್ಬದ ಹಿನ್ನೆಲೆಯಲ್ಲಿ ಜನರು ಪ್ರವಾಸಿತಾಣ ಹಾಗೂ ದೇವಾಲಯಗಳತ್ತ ತೆರಳುತ್ತಿದ್ದು, ಪ್ರಮುಖ ಹೆದ್ದಾರಿಗಳಲ್ಲಿ ಇಂದು ಸಂಚಾರದಟ್ಟಣೆ ಕಂಡುಬಂದಿತು.ಬೆಂಗಳೂರಿನಿಂದ ಮಂಗಳೂರು, ಮಡಿಕೇರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳತ್ತ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಾಲು ಸಾಲು ರಜೆಗಳು ಇರುವುದರಿಂದ ಒಂದೇ ವೇಳೆ ನೂರಾರು ವಾಹನಗಳು ರಸ್ತೆಗೆ ಇಳಿದ ಪರಿಣಾಮ ಬೆಂಗಳೂರುಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ.
ಹಿರಿಸಾವೆ, ಕುಣಿಗಲ್, ಶಾಂತಿಗ್ರಾಮ ಹಾಗೂ ಬೈರಾಪುರ ಟೋಲ್‌ಗೇಟ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದಿವೆ. ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಪ್ರಯಾಣಿಕರು ಗಂಟೆಗಳ ಕಾಲ ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇ ರೀತಿ ಮೈಸೂರು, ಶ್ರೀರಂಗಪಟ್ಟಣ, ನಂಜನಗೂಡು, ಶಿವನಸಮುದ್ರ, ಗಗನಚುಕ್ಕಿ-ಭರಚುಕ್ಕಿ, ನಿಮಿಷಾಂಬ ದೇವಸ್ಥಾನ, ಮಡಿಕೇರಿ, ಊಟಿ ಸೇರಿದಂತೆ ಹಲವಾರು ಪ್ರವಾಸಿತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುತ್ತಿದ್ದು, ಇಂದು ಬೆಳಿಗ್ಗೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ, ಕಣಮಿಣಕಿ ಟೋಲ್ ಬಳಿ ವಾಹನಗಳ ದಟ್ಟಣೆ ಕಂಡುಬಂದಿತು.
ಅದೇ ರೀತಿ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, 8ನೇ ಮೈಲಿ, ಜಾಲಳ್ಳಿ ಕ್ರಾಸ್, ಮಾದಾವರ ಜಂಕ್ಷನ್, ನೆಲಮಂಗಲ ಟೋಲ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.
