Thursday, January 8, 2026
Homeರಾಜಕೀಯಕಾಂಗ್ರೆಸ್‌‍ನಲ್ಲಿ ಮತ್ತೆ ಕಿಡಿ ಹಚ್ಚಿದ ಕೆ.ಎನ್‌.ರಾಜಣ್ಣ ಹೇಳಿಕೆ

ಕಾಂಗ್ರೆಸ್‌‍ನಲ್ಲಿ ಮತ್ತೆ ಕಿಡಿ ಹಚ್ಚಿದ ಕೆ.ಎನ್‌.ರಾಜಣ್ಣ ಹೇಳಿಕೆ

K.N. Rajanna's statement ignites a new spark in Congress

ಬೆಂಗಳೂರು, ಜ.7– ಬೆಂಗಳೂರು, ಜ.7- ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಅವಧಿಗಷ್ಟೇ ಅಲ್ಲ, ಮುಂದಿನ ಅವಧಿಗೂ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಪ್ರತಿಪಾದಿಸುವ ಮೂಲಕ ಡಿ.ಕೆ.ಶಿವಕುಮಾರ್‌ ಅವರ ಬಣವನ್ನು ಕೆಣಕುವ ಪ್ರಯತ್ನಗಳು ನಡೆಯುತ್ತಿವೆ.

ಕಾಂಗ್ರೆಸ್‌‍ ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ ಎನ್ನುವಾಗಲೇ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎನ್‌.ರಾಜಣ್ಣ ತಿಳಿಗೊಳಕ್ಕೆ ಕಲ್ಲೆಸೆಯುವ ಪ್ರಯತ್ನವನ್ನು ಮೊದಲಿನಿಂದಲೂ ನಡೆಸುತ್ತಲೇ ಬಂದಿದ್ದಾರೆ. ರಾಜ್ಯ ರಾಜಕೀಯದಲ್ಲಿ ರಾಜಣ್ಣ ನೀಡುವ ಹೇಳಿಕೆಗಳು ಕಾಲಕಾಲಕ್ಕೆ ಭಾರಿ ಚರ್ಚೆಗೆ ಗ್ರಾಸವಾಗುತ್ತಿವೆ.

ಈ ಹಿಂದೆ ಜಾತಿವಾರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಬೇಕು ಎಂದು ರಾಜಣ್ಣ ಹೇಳಿದಾಗ, ಅದು ಸುಮಾರು 9 ತಿಂಗಳ ಕಾಲ ಚರ್ಚೆಯಲ್ಲಿತ್ತು. ಕಳೆದ ವರ್ಷ ರಾಜಣ್ಣ ಸೆಪ್ಟಂಬರ್‌ ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದಿದ್ದರು. ಅದನ್ನು ಆಧರಿಸಿ ಬಹಳಷ್ಟು ಚರ್ಚೆಗಳು ಹುಟ್ಟಿಕೊಂಡಿದ್ದವು. ಇದು ನಾಯಕತ್ವದ ಬದಲಾವಣೆ ಚರ್ಚೆಗೆ ಮುನ್ನುಡಿಯಾಗಿತ್ತು. ಡಿ.ಕೆ.ಶಿವಕುಮಾರ್‌ ಬಣ ಸತತ ಪ್ರಯತ್ನಗಳನ್ನು ನಡೆಸಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕಾರ್ಯತಂತ್ರ ನಡೆಸಿತ್ತು.

ಎಷ್ಟೇ ಪ್ರಯತ್ನ ನಡೆಸಿದರೂ ಡಿ.ಕೆ ಶಿವಕುಮಾರ್‌ ಅವರನ್ನು ಪಟ್ಟಕ್ಕೇರಿಸುವ ಪ್ರಯತ್ನಗಳು ಫಲ ನೀಡಲಿಲ್ಲ. ಆದರೆ ಒಂದಿಷ್ಟು ರಾಜಕೀಯ ರಾಡಿಗಳು ಜೋರಾಗಿದ್ದವು.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವೆ ಉಪಾಹಾರ ಕೂಟಗಳ ಬಳಿಕ ವಾತಾವರಣ ಒಂದಿಷ್ಟು ತಿಳಿಯಾದಂತೆ ಕಂಡು ಬಂದಿತ್ತು. ಆದರೆ ಕೆ.ಎನ್‌.ರಾಜಣ್ಣ ಅವರು ಈಗ ನೀಡಿರುವ ಹೇಳಿಕೆ ಡಿ.ಕೆ.ಶಿವಕುಮಾರ್‌ ಬಣದ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ.

ಮುಖ್ಯಮಂತ್ರಿ ಹುದ್ದೆಯ ಮೇಲೆ ಕಾಂಗ್ರೆಸ್ಸಿನಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಹಿರಿಯ ನಾಯಕರು ಕಣ್ಣಿಟ್ಟಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೇ ಅವಧಿಯಲ್ಲೇ ಮುಖ್ಯಮಂತ್ರಿಯಾಗಬೇಕು ಎಂದು ಹವಣಿಸುತ್ತಿದ್ದಾರೆ. ಜೊತೆಗೆ ಸಚಿವರಾದ ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಎಚ್‌.ಕೆ.ಪಾಟೀಲ್‌, ಕೆ.ಎಚ್‌.ಮುನಿಯಪ್ಪ ಸೇರಿದಂತೆ ಹಲವಾರು ನಾಯಕರು ಮುಖ್ಯಮಂತ್ರಿ ಹುದ್ದೆಗೆ ಟವೆಲ್‌ ಹಾಕಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ 2028ರ ನಂತರ ಮುಖ್ಯಮಂತ್ರಿಯಾಗಬೇಕು ಎಂದು ಕೆ.ಎನ್‌.ರಾಜಣ್ಣ ಹೇಳಿರುವುದು, ಮುಖ್ಯಮಂತ್ರಿ ಹುದ್ದೆಯ ರೇಸ್‌‍ ನಲ್ಲಿದ್ದ ಆಕಾಂಕ್ಷಿಗಳ ಹಾಗೂ ಅವರ ಬೆಂಬಲಿಗರ ಅಸಹನೆೆಗೆ ಕಾರಣವಾಗಿದೆ.

ಕಾಂಗ್ರೆಸ್‌‍ ನಲ್ಲಿ ಕುದಿ ಮೌನ :
ಜೆಡಿಎಸ್‌‍ ನಿಂದ ಕಾಂಗ್ರೆಸ್‌‍ಗೆ ಬಂದ ಸಿದ್ದರಾಮಯ್ಯ ಅವರು ಆರು ವರ್ಷಕ್ಕೆ ಕಾಂಗ್ರೆಸ್‌‍ ನಲ್ಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಎರಡನೇ ಅವಧಿಗೂ ಸಿದ್ದರಾಮಯ್ಯ ಸಲೀಸಾಗಿ ಮುಖ್ಯಮಂತ್ರಿ ಹುದ್ದೆಗೇರಿದರು.ಈಗ ದಿವಂಗತ ದೇವರಾಜ್‌ ಅರಸು ಅವರ ದಾಖಲೆಯನ್ನು ಮೀರಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಇದನ್ನೆಲ್ಲಾ ಕಂಡು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್‌‍ ನಲ್ಲಿ ಬಹಳಷ್ಟು ಮಂದಿ ಪಕ್ಷ ನಿಷ್ಠ ನಾಯಕರು ಒಳಗೊಳಗೆ ಕುದಿಯುತ್ತಿದ್ದಾರೆ. ಅದರ ನಡುವೆ ಮತ್ತೊಂದು ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ರಾಜಣ್ಣ ಧ್ವನಿ ಎತ್ತಿರುವುದು ಮತ್ತಷ್ಟು ಅಸಹನೆಗೆ ಕಾರಣವಾಗಿದೆ.

ಇರುವ ಎಲ್ಲಾ ಅವಧಿಗಳಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿ! ನಾವು ಸನ್ಯಾಸಿಗಳಾಗುತ್ತೇವೆ! ಎಂದು ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ತಮ ಸಿಟ್ಟನ್ನು ತೋಡಿಕೊಂಡಿದ್ದಾರೆ. ಕಾಂಗ್ರೆಸ್‌‍ಗೆ ಸ್ಪಷ್ಟ ಬಹುಮತ ಬಂದಾಗ ಸಿದ್ದರಾಮಯ್ಯ ಸುಲಭವಾಗಿ ಮುಖ್ಯಮಂತ್ರಿಯಾಗುತ್ತಾರೆ. ಅದರೆ ಸೋಲಿನ ಹೊಣೆಗಾರಿಕೆಗೆ ಮಾತ್ರ ಹೆಗಲು ಕೊಡುವುದಿಲ್ಲ. ಪಕ್ಷ ಚುನಾವಣೆಯಲ್ಲಿ ಸೋಲು ಕಂಡಾಗ ಅದಕ್ಕೆ ಸಾಮೂಹಿಕ ನಾಯಕತ್ವ ಕಾರಣ ಎಂಬ ವಾದ ಕೇಳಿ ಬರುತ್ತದೆ. ಗೆದ್ದಾಗ ಮಾತ್ರ ಅದಕ್ಕೆ ಸಿದ್ದರಾಮಯ್ಯ ಮಾತ್ರ ಕಾರಣರಾಗುತ್ತಾರೆ ಎಂಬ ಸಿಡಿಮಿಡಿಯನ್ನು ನಾಯಕರು ಹೊರ ಹಾಕುತ್ತಿದ್ದಾರೆ.

ಒಂದು ವೇಳೆ ಕಾಂಗ್ರೆಸ್‌‍ ಸೋಲು ಕಂಡರೂ ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ಸಿದ್ದರಾಮಯ್ಯ ಅವರೇ ಆಯ್ಕೆಯಾಗುತ್ತಾರೆ. ಪಕ್ಷದಲ್ಲಿ ಅಧಿಕಾರ ಎಂಬುದು ಸಿದ್ದರಾಮಯ್ಯ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ನಾಯಕರು ತಮ ದುಗುಡ ವ್ಯಕ್ತ ಪಡಿಸುತ್ತಿದ್ದಾರೆ. ಇಂತಹ ಅಸಹನೆಯ ವಾತಾವರಣದಲ್ಲಿ ಕೆ.ಎನ್‌.ರಾಜಣ್ಣ ಅವರ ಹೇಳಿಕೆ ಮತ್ತಷ್ಟು ಆಕ್ರೋಶದ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಿದೆ.

RELATED ARTICLES

Latest News