ಬೆಂಗಳೂರು, ಡಿ.5- ಒಂದು ಕಡೆ ಬಿಜೆಪಿ ಭಿನ್ನಮತೀಯ ನಾಯಕರು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇದೀಗ ತಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಲು ಬಹಿರಂಗವಾಗಿಯೇ ಅಖಾಡಕ್ಕೆ ಧುಮುಕಿದ್ದಾರೆ.
ಯಾವುದೇ ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರೂ ಯಡಿಯೂರಪ್ಪ ಅವರು ಏಕಾಏಕಿ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಗೆ ತೆರಳಿರುವ ಅವರು ಕರ್ನಾಟಕದ ಬೆಳವಣಿಗೆಗಳ ಕುರಿತಂತೆ, ಚರ್ಚೆ ನಡೆಸಿ ತಮ ಪುತ್ರ ವಿಜಯೇಂದ್ರ ಪರ ಲಾಭಿ ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಬಹಿರಂಗವಾಗಿ ಕುಸ್ತಿ ನಡೆಯುತ್ತಿದ್ದು ಇದರ ಬಗ್ಗೆ ದೆಹಲಿ ವರಿಷ್ಠರು ಮಾಹಿತಿ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ. ಕರ್ನಾಟಕದ ಬೆಳವಣಿಗೆಗಳ ಕುರಿತು ಸಮಗ್ರ ವರದಿ ನೀಡಬೇಕೆಂದು ಕೆಲ ದಿನಗಳ ಹಿಂದೆ ದೆಹಲಿ ವರಿಷ್ಠರಿಂದ ಮೌಖಿಕ ಸೂಚನೆ ಬಂದಿತ್ತು. ತಮದೇ ಆದ ಆಪ್ತ ಮೂಲಗಳಿಂದ ಮಾಹಿತಿಯನ್ನು ಕಲೆ ಹಾಕಿರುವ ಅವರು, ಕಾಂಗ್ರೆಸ್ನ ಬಣ ಬಡಿದಾಟದ ಕುರಿತು ಕೇಂದ್ರ ಗಹ ಸಚಿವ ಅಮಿತ್ ಶಾ ಅವರಿಗೆ ರಹಸ್ಯ ವರದಿಯನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೊಂದು ಮೂಲಗಳ ಪ್ರಕಾರ, ದೆಹಲಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತತ್ವದ ತಂಡ ಪಕ್ಷದ ಕೆಲವು ವರಿಷ್ಠರನ್ನು ಭೇಟಿಯಾಗಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಪಕ್ಷ ಮತ್ತು ಸಂಘ ಪರಿವಾರ ಹಿನ್ನೆಲೆಯುಳ್ಳವರನ್ನು ನೇಮಕ ಮಾಡಬೇಕೆಂದು ಪಟ್ಟು ಹಿಡಿದಿದ್ದು, ರಾಜ್ಯ ಉಸ್ತುವಾರಿ ಡಾ.ರಾಧ ಮೋಹನ್ ಅಗರ್ ವಾಲ್ ಸೇರಿದಂತೆ ದೆಹಲಿಯಲ್ಲಿ ಕೆಲವು ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರಿಂದ ತುಸು ಅಧೀರರಾದಂತೆ ಕಂಡುಬಂದಿರುವ ಯಡಿಯೂರಪ್ಪ ಪುತ್ರನ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ದೆಹಲಿಗೆ ದೌಢಾಯಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿಯಲ್ಲಿ ಈಗಲೂ ಯಡಿಯೂರಪ್ಪ ಮಾತಿಗೆ ತೂಕವಿದೆ. ಯಾವುದೇ ಪ್ರಮುಖ ನೇಮಕಾತಿ ಸೇರಿದಂತೆ ಕೆಲವು ಮಹತ್ವದ ವಿಷಯಗಳಲ್ಲಿ ಅವರ ಮಾತನ್ನು ಪಕ್ಷದ ವರಿಷ್ಠರು ತೆಗೆದು ಹಾಕುವುದಿಲ್ಲ. ಕರ್ನಾಟಕಕ್ಕೆ ಯಾವುದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಮಾಡಬಹುದೆಂಬ ಸುಳಿವು ಅರಿತೇ ಯಡಿಯೂರಪ್ಪ ದೆಹಲಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಅವರ ಆಪ್ತರು, ಇದೊಂದು ಖಾಸಗಿ ಭೇಟಿ ಎಂದು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬಿಎಸ್ ವೈ ಕೆಲವು ಪ್ರಮುಖ ನಾಯಕರನ್ನು ಭೇಟಿ ಮಾಡಿ ಕರ್ನಾಟಕದ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಮನವಿ ಮಾಡಲಿದ್ದಾರೆ.
ಕನಿಷ್ಠಪಕ್ಷ ಮೂರು ವರ್ಷಗಳ ಅವಧಿಗೆ ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡುವಂತೆ ವರಿಷ್ಠರ ಬಳಿ ಬೇಡಿಕೆ ಸಲ್ಲಿಸಲಿದ್ದಾರೆ ಎಂದು ಗೊತ್ತಾಗಿದೆ. ಅಧ್ಯಕ್ಷ ಸ್ಥಾನ ಎಂಬ ಜೇನುಗೂಡಿಗೆ ತಕ್ಷಣವೇ ಕೈ ಹಾಕದೇ ಕಾದು ನೋಡುವ ತಂತ್ರವನ್ನು ಹೈಕಮಾಂಡ್ ಮಾಡುತ್ತಿದೆ. ಅದಕ್ಕೆ ಕಾರಣ ಅಧ್ಯಕ್ಷ ಗಾದಿಯಲ್ಲಿ ಕುಳಿತಿರುವುದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ ಬದಲಾಗಿ ಮಾಜಿ ಸಿಎಂ, ಬಿಜೆಪಿ ಶಕ್ತಿ ಬಿಎಸ್ ಯಡಿಯೂರಪ್ಪನವರ ಪುತ್ರ, ಇದು ಅವರಿಗೆ ಎಷ್ಟು ಪ್ಲಸ್ ಆಗಿದೆಯೋ, ಅಷ್ಟೇ ಮೈಮನಸ್ಸೂ ಕೂಡ ಆಗಿದೆ.
ಬಿಎಸ್ವೈ ಪುತ್ರ ಎಂಬ ಕಾರಣಕ್ಕೆ ಈಗ ಅವರ ವಿರೋಧಿ ಬಣ ವಿಜಯೇಂದ್ರ ಮುಂದುರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಇನ್ನೊಂದು ಕಡೆ ವಿಜಯೇಂದ್ರ ಮುಂದುವರೆಯಬೇಕು ಎನ್ನುವ ಬಣ ಇದೆ. ಹೀಗಾಗಿ ಹೈಕಮಾಂಡ್ ಇಲ್ಲಿ ತಾಳೆಯ ಆಟ ಆಡುತ್ತಿದೆ. ಈಗ ಮಗನ ಕುರ್ಚಿ ಭದ್ರಪಡಿಸಲು ಸ್ವತಃ ಬಿಎಸ್ವೈ ಅಖಾಡಕ್ಕೆ ಧುಮುಕಿದ್ದಾರೆ. ಪಕ್ಷದ ಚುಕ್ಕಾಣಿ ಹಿಡಿಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಮಟ್ಟದ ಲಾಬಿ, ಗುಂಪುಗಾರಿಕೆ ಮತ್ತು ತೆರೆಮರೆಯ ತಂತ್ರಗಾರಿಕೆಗಳು ಶುರುವಾಗಿವೆ. ಈ ಚದುರಂಗದಾಟದ ಕೇಂದ್ರಬಿಂದು ಬಿ.ಎಸ್. ಯಡಿಯೂರಪ್ಪ.
ಬಿಹಾರ ಚುನಾವಣೆ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಸಂಘಟನಾತಕ ಬದಲಾವಣೆ ಮಾಡಬಹುದೆಂಬ ನಿರೀಕ್ಷೆ ಇದೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮುಖರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮುಂದುವರಿಕೆಗೆ ಯಡಿಯೂರಪ್ಪ ಅವರ ಬೆಂಬಲಿಗರು ಆಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧಾರ ಇನ್ನೂ ತಿಳಿಸಿಲ್ಲ.ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರ ಮುಂದುವರಿಕೆಗೆ ಯಡಿಯೂರಪ್ಪ ಅವರ ಬೆಂಬಲಿಗರು ಮತ್ತು ಸ್ವತಃ ಯಡಿಯೂರಪ್ಪ ಅವರ ಆಶಯವಾಗಿದೆ. ಆದರೆ, ಬಿಜೆಪಿ ವರಿಷ್ಠರು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ, ಬಿಎಸ್ ಯಡಿಯೂರಪ್ಪ ಅವರು ಪ್ರಧಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪಗೆ ಹೈಕಮಾಂಡ್ನಿಂದ ಸೂಚನೆ
ಇತ್ತೀಚೆಗೆ, ಬಿಹಾರ ಚುನಾವಣೆ ಸಂಬಂಧಿಸಿದ ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ಸಭೆಗಳಿಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಹೈಕಮಾಂಡ್ನಿಂದ ಸೂಚನೆ ಬಂದಿತ್ತು. ಯಡಿಯೂರಪ್ಪ ಅವರ ಬೆಂಬಲಿಗರು ತಮ್ಮ ನಾಯಕನ ಪುತ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಬಯಸುತ್ತಿದ್ದಾರೆ. ಯಡಿಯೂರಪ್ಪ ಅವರೂ ತಮ್ಮ ಪುತ್ರನ ರಾಜಕೀಯ ಭವಿಷ್ಯದ ದಷ್ಟಿಯಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಈ ವಿಚಾರದಲ್ಲಿ ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.!
