Friday, December 19, 2025
Homeರಾಜ್ಯತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕ ನಂ.1 : ಸಿಂ ಸಿದ್ದರಾಮಯ್ಯ

ತಲಾದಾಯದಲ್ಲಿ ದೇಶದಲ್ಲೇ ಕರ್ನಾಟಕ ನಂ.1 : ಸಿಂ ಸಿದ್ದರಾಮಯ್ಯ

Karnataka No.1 in the country in per capita income: CM Siddaramaiah

ಬೆಳಗಾವಿ,ಡಿ.19- ತಲಾ ಆದಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು.ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜ್ಯದ ಸರಾಸರಿ ತಲಾ ಆದಾಯ 3,39,813 ರೂ. ಇದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾ ಆದಾಯ ರಾಜ್ಯದ ಇತರೆಡೆಗೆ ಹೋಲಿಸಿದರೆ ಕಡಿಮೆ ಇದೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ತಲಾ ಆದಾಯ 3.4 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದು, 10 ಜಿಲ್ಲೆಗಳ ತಲಾ ಆದಾಯ ಎರಡೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ಇದೆ. ಇದು ಮಂಡ್ಯ, ತುಮಕೂರು, ಕೊಡಗು, ಹಾಸನ, ಬಳ್ಳಾರಿ, ರಾಮನಗರ, ಉತ್ತರ ಕನ್ನಡ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳಾಗಿವೆ. 2 ಲಕ್ಷಕ್ಕಿಂತ ಕಡಿಮೆ ತಲಾ ಆದಾಯ ಹೊಂದಿರುವ ಜಿಲ್ಲೆಗಳೆಂದರೆ ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್‌, ಬೆಳಗಾವಿ, ಕೊಪ್ಪಳ, ಯಾದಗಿರಿ, ಕಲಬುರಗಿ ಜಿಲ್ಲೆಗಳು ಎಂದರು.

ತಲಾ ಆದಾಯವನ್ನು ಅಭಿವೃದ್ಧಿಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಕೈಗಾರಿಕೆ ಹಾಗೂ ವಾಣಿಜ್ಯ ವ್ಯವಹಾರ ಹೆಚ್ಚಿರುವ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚಿದ್ದರೆ, ಕೃಷಿ ಅವಲಂಬಿತ ಜಿಲ್ಲೆಗಳಲ್ಲಿ ಕಡಿಮೆ ಇದೆ. ಕಡಿಮೆ ತಲಾ ಆದಾಯವಿರುವ ಜಿಲ್ಲೆಗಳ ಸುಧಾರಣೆಗೆ ಗಮನ ಹರಿಸಬೇಕಾಗಿದೆ. ಉತ್ತರ ಕರ್ನಾಟಕದ 10 ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾ ಆದಾಯ ಕಡಿಮೆಯಾಗಲು ಹೈನುಗಾರಿಕೆಯ ಚಟುವಟಿಕೆಗಳು ಕಡಿಮೆ ಇರುವುದು ಎಂದು ಹೇಳಿದರು.

ಬೆಂಗಳೂರು ಡೈರಿಯಲ್ಲಿ ಪ್ರತಿದಿನ 17.13 ಲಕ್ಷ ಕೆ ಜಿ ಹಾಲು ಸಂಗ್ರಹವಾದರೆ, ಕಲಬುರಗಿ ಡೈರಿಯಲ್ಲಿ ಕೇವಲ 67 ಸಾವಿರ ಕೆ ಜಿ ಹಾಲು ಉತ್ಪಾದನೆಯಾಗುತ್ತಿದೆ ಎಂದರು.ರಾಜ್ಯದಲ್ಲಿ ಪ್ರಸ್ತುತ 6.95 ಕೋಟಿ ಜನಸಂಖ್ಯೆ ಇರಬಹುದು. ಇದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಶೇ.42 ರಷ್ಟು ಅಂದರೆ 2.96 ಕೋಟಿ ಜನಸಂಖ್ಯೆ ಇದೆೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಕೆ ಜಿ ಮಾತ್ರ ಇದೆ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳ ಹಾಲಿನ ಸಂಗ್ರಹದ ಪ್ರಮಾಣ 22.4 ಲೀ.ಗಳಷ್ಟಿದೆ ಎಂದು ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದರು.

ಹಾಲಿನ ಪ್ರೋತ್ಸಾಹ ಧನ 7 ರೂ.ಗೆ ಹೆಚ್ಚಳ :
ಹಾಲಿನ ಪ್ರೋತ್ಸಾಹ ಧನವನ್ನು ಕೊಟ್ಟಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ನಮ ಅವಧಿ ಮುಗಿಯುವುದರೊಳಗೆ ಹಾಲಿನ ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವನ್ನು 7 ರೂ.ಗೆ ಹೆಚ್ಚಿಸಲಾಗುವುದು. ಪ್ರತಿದಿನ 1 ಕೋಟಿ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, 5 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಯಾವುದೇ ಒಕ್ಕೂಟದ ಯಾವುದೇ ಸಂಘದಲ್ಲಿ ಪ್ರೋತ್ಸಾಹಧನ ನೀಡದಿದ್ದರೆ ಮಾಹಿತಿ ನೀಡಿ. ಅದಕ್ಕೆ ನೀಡುತ್ತಿರುವ ಪ್ರೋತ್ಸಾಹಧನವನ್ನು ನಿಲ್ಲಸಲಾಗುವುದು ಎಂದು ಹೇಳಿದರು.

2013 ರಿಂದ 2018ರ ನಡುವಿನ ಅವಧಿಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. 2023 ರಲ್ಲಿ ನೀಡಿದ್ದ 593 ಭರವಸೆಗಳಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು 600 ಭರವಸೆ ನೀಡಿ ಕೇವಲ 60 ರಷ್ಟು ಅಂದರೆ ಶೇ.10 ರಷ್ಟು ಮಾತ್ರ ಈಡೇರಿಸಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಭರವಸೆಯನ್ನು ಈಡೇರಿಸಿಲ್ಲ ಎಂದು ಛೇಡಿಸಿದರು. ಆಗ ಸಿಎಂ ಸಿದ್ದರಾಮಯ್ಯನವರು ನಮ ಭರವಸೆ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

RELATED ARTICLES

Latest News