ಬೆಂಗಳೂರು,ಡಿ.13-ರಾಜ್ಯದಲ್ಲಿ ಮಾಗಿ ಚಳಿ ಹೆಚ್ಚಾಗಿದ್ದು, ಜನರು ತತ್ತರಿಸುವಂತೆ ಮಾಡಿದೆ. ಕರಾವಳಿ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿ.ಸೆ.ಗಿಂತ ಕಡಿಮೆ ದಾಖಲಾಗುತ್ತಿದೆ. ಅದೇ ರೀತಿ ಕನಿಷ್ಠ ತಾಪಮಾನ ಸರಾಸರಿ 15 ಡಿ.ಸೆ.ಗಿಂತ ಕಡಿಮೆಯಾಗುತ್ತಿದೆ.
ಕರಾವಳಿ ಭಾಗದಲ್ಲಿ ಮಾತ್ರ ಕನಿಷ್ಠ ತಾಪಮಾನ 15 ಡಿ.ಸೆ.ಗಿಂತ ಹೆಚ್ಚಾಗಿದ್ದು, ಗರಿಷ್ಠ ತಾಪಮಾನವು 30 ಡಿ.ಸೆ.ಗಿಂತ ಹೆಚ್ಚಿದೆ. ಬಿಸಿಲ ನಾಡೆಂದೇ ಬಿಂಬಿಸಲಾಗುವ ಕಲ್ಯಾಣ ಕರ್ನಾಟಕ ಭಾಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಗಣನೀಯವಾಗಿ ಕುಸಿಯುತ್ತಿದ್ದು, ಮೈ ಕೊರೆಯುವ ಚಳಿ ಜನರನ್ನು ಬಾಧಿಸುತ್ತಿದೆ.
ಹಿಂಗಾರು ಮಳೆ ಕೈಕೊಟ್ಟು ವಾಡಿಕೆಗಿಂತ ಕಡಿಮೆಯಾಗಿದೆ. ಅಲ್ಲದೆ ಮೇಲಿಂದ ಮೇಲೆ ಉಂಟಾದ ಚಂಡಮಾರುತಗಳ ಪ್ರಭಾವದಿಂದಲೂ ಆಗಾಗ್ಗೆ ಬೀಸಿದ ಶೀತ ಗಾಳಿ ಜನರನ್ನು ತತ್ತರಿಸುವಂತೆ ಮಾಡಿದೆ. ಮೈ ಕೊರೆಯುವ ಚಳಿಯ ಜೊತೆಗೆ ಆಗಾಗ್ಗೆ ಬೀಸುವ ಮೇಲೈ ಶೀತ ಗಾಳಿಗೆ ಜನರು ಹೈರಾಣರಾಗಿದ್ದಾರೆ.
ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ಹೊದಿಕೆಗಳ ಮೊರೆ ಹೋಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಚಳಿಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ಮುನ್ನಚ್ಚರಿಕೆ ವಹಿಸಿ ರಾತ್ರಿ ಹಾಗೂ ಮುಂಜಾನೆ ಬೆಚ್ಚನೆಯ ಉಡುಪುಗಳನ್ನು ಧರಿಸಿ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ 10.4 ಡಿ.ಸೆ, ಬೀದರ್ 7.8, ವಿಜಯಪುರ 7, ಧಾರವಾಡ 9, ಗದಗ 10.2, ಕಲಬುರಗಿ 13, ಹಾವೇರಿ 11.8, ಕೊಪ್ಪಳ 11.9, ರಾಯಚೂರು 9.6, ಆಗುಂಬೆ 10.6, ಬೆಂಗಳೂರು 13.3, ದೇವನಹಳ್ಳಿ ವಿಮಾನ ನಿಲ್ದಾಣ 14.7, ಚಿತ್ರದುರ್ಗ 14, ದಾವಣಗೆರೆ 10, ಹಾಸನ 8, ಚಿಂತಾಮಣಿ 8.4, ಮೈಸೂರು 15.4, ಶಿವಮೊಗ್ಗ 11.4 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.
ಗರಿಷ್ಠ ತಾಪಮಾನ 25ರಿಂದ 28 ಡಿ.ಸೆ.ನಷ್ಟು ದಾಖಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ಕೂಡ ಚಳಿಯ ಪ್ರಮಾಣ ತೀವ್ರಗೊಂಡಿದೆ. ಕೆಲವೆಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಮುಂಜಾನೆ ಮಂಜು ಕವಿಯುವುದು, ಇಬ್ಬನಿ ಹೆಚ್ಚಾಗಿ ಬೀಳುವುದು ಕಂಡುಬರುತ್ತಿದೆ. ಕೆಲವೆಡೆ ದಟ್ಟ ಮಂಜು ಕೂಡ ಆವರಿಸುತ್ತಿದೆ. ವಾಹನ ಸವಾರರು ಇಂಥ ಕಡೆಗಳಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂ ಸಲಹೆಯನ್ನು ತಜ್ಞರು ಮಾಡಿದ್ದಾರೆ.
