ಬೆಂಗಳೂರು,ಜ.4- ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರು ಅವರು ಆತಹತ್ಯೆಗೆ ಯತ್ನಿಸಿಲ್ಲ ಎಂದು ಅವರ ತಂದೆ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ್ದ ದಿನವೇ ಪವನ್ ನೆಜ್ಜೂರು ಅವರನ್ನು ಸರ್ಕಾರ ಕರ್ತವ್ಯ ಲೋಪದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಿದೆ.
ಈ ಘಟನೆಯಿಂದ ಅವರು ಬೇಸರಗೊಂಡು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಸ್ನೇಹಿತನ ಫಾರಂಹೌಸ್‌ನಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಮಾಧ್ಯಮಗಳಲ್ಲಿ ಹಬ್ಬಿತ್ತು.
ಇದಕ್ಕೆ ಸ್ವತಃ ಪವನ್ ನೆಜ್ಜೂರು ಅವರ ತಂದೆ ಉದಯ ಶಂಕರ ನೆಜ್ಜೂರು ಅವರು ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ಪುತ್ರ ಆತಹತ್ಯೆಗೆ ಪ್ರಯತ್ನಿಸಿಲ್ಲ. ಮಾಧ್ಯಮಗಳಲ್ಲಿ ಆಧಾರರಹಿತ ಸುದ್ದಿಗಳು ಬಿತ್ತರವಾಗಿವೆ. ನನ್ನ ಮಗ ಆತಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.
ಅಮಾನತುಗೊಂಡ ನಂತರ ಸ್ವಲ್ಪ ಬೇಸರಗೊಂಡಿದ್ದರು. ಆದರೆ ಅವರು ಆತಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಥಿತಿ ಹೊಂದಿಲ್ಲ. ಮಾಧ್ಯಮಗಳಲ್ಲಿ ಕಪೋಲಕಲ್ಪಿತ ವಿಷಯಗಳು ಚರ್ಚೆಯಾಗುತ್ತಿರುವುದು ನನಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್ ನೆಜ್ಜೂರು ಆಘಾತಕ್ಕೆ ಒಳಗಾಗಿದ್ದಾನೆ. ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ.
ಆಘಾತಕ್ಕೆ ಒಳಗಾಗಿರುವ ನನ್ನ ಪುತ್ರನಿಗೆ ಕೊಂಚ ವಿಶ್ರಾಂತಿಯ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಬಳ್ಳಾರಿಯ ಎಸ್ಪಿ ವೃತ್ತದಲ್ಲಿ ನಡೆದ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದ. ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ.
