ಹಾಸನ, ಡಿ.28- ಜಿಲ್ಲೆಯ ಮಲೆನಾಡು ಭಾಗದ ಹಲವು ಗ್ರಾಮಗಳಲ್ಲಿ ಸಂಚರಿಸುತ್ತಿರುವ ಶಾಂತ ಸ್ವಭಾವದ ಕಾಡಾನೆ ಭೀಮನನ್ನು ನೋಡಲು ಜನರು ಮುಗಿ ಬೀಳುತ್ತಿದ್ದು, ಫೋಟೋ ತೆಗೆಯಲು, ವಿಡಿಯೋ ಚಿತ್ರೀಕರಿಸಲು ಮುಂದಾಗುದ್ದು, ಜನರ ಇಂತಹ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು ಇನ್ನು ಮುಂದೆ ಭೀಮನ ಫೋಟೋ, ವಿಡಿಯೋ ತೆಗೆಯದಂತೆ ಆದೇಶ ಹೊರಡಿಸಿದೆ.
ಈ ಕುರಿತು ಡಿಎಫ್ಒ ಸೌರಭ್ ಕುಮಾರ್ ಮಾತನಾಡಿ, ಕಾಡಾನೆ ಭೀಮ ಜಿಲ್ಲೆಯ ಮಲೆನಾಡು ಭಾಗ ಸೇರಿದಂತೆ ಕೆಲ ತಾಲೂಕಿನಲ್ಲಿಯೂ ಸಂಚಾರ ಮಾಡುತ್ತಿದೆ. ಇಲಾಖೆಯ ಇಟಿಎಫ್ ತಂಡ ದಿನದ 24 ಗಂಟೆಯೂ ಭೀಮನ ಚಲನವಲನವನ್ನು ಗಮನಿಸುತ್ತಿದೆ. ಭೀಮ ಸಂಚರಿಸುವ ಸಂದರ್ಭದಲ್ಲಿ ಜನರು ಫೋಟೋ ಹಾಗೂ ವಿಡಿಯೋ ತೆಗೆಯದಂತೆ ವಿನಂತಿ ಮಾಡಲಾಗಿದೆ ಹಾಗೂ ಎಚ್ಚರಿಕೆ ನೀಡಲಾಗಿದೆ ಎಂದರು.
ವನ್ಯಜೀವಿ (ರಕ್ಷಣೆ) ಕಾಯ್ದೆ, 1972 (ಡಬ್ಲ ್ಯಪಿಎ) ಭಾರತದ ಪ್ರಮುಖ ಕಾನೂನಾಗಿದ್ದು, ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ರಕ್ಷಿಸಲು, ಜೀವವೈವಿಧ್ಯತೆಯನ್ನು ಸಂರಕ್ಷಿಸಲು ರೂಪಿಸಲಾಗಿದೆ. ಈ ಕಾಯ್ದೆ ಪ್ರಕಾರ ಪ್ರಾಣಿಗಳಿಗೆ ತೊಂದರೆ ನೀಡುವುದು ಅಪರಾಧವಾಗಿದೆ ಎಂದು ಹೇಳಿದರು.
ಜನರು ಹಾಗೂ ಪ್ರಾಣಿಯ ಸುರಕ್ಷತೆ ದೃಷ್ಟಿಯಿಂದ ಭೀಮನ ಬಳಿ ಹೋಗಬಾರದು ನಿಮ ಪ್ರಾಣವನ್ನು ನೀವೇ ರಕ್ಷಣೆ ಮಾಡಿಕೊಳ್ಳಬೇಕಿದೆ. ಕಾಡುಪ್ರಾಣಿ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುತ್ತದೆ ಎಂಬುದನ್ನು ಹೇಳಲಾಗದು. ಆದ್ದರಿಂದ ಜನ ಅನಾವಶ್ಯಕವಾಗಿ ಆನೆಗೆ ತೊಂದರೆ ನೀಡಬಾರದು. ಇನ್ನು ಮುಂದೆ ಭೀಮನ ಸಮೀಪ ಹೋಗಿ ವಿಡಿಯೋ ಚಿತ್ರೀಕರಣ ಮಾಡಿದರೆ ಹಾಗೂ ಫೋಟೋ ಸೆಲ್ಫಿ ತೆಗೆದರೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಹಲವು ದಿನಗಳಿಂದ ಇಟಿಎಫ್ ಸಿಬ್ಬಂದಿಗಳು ಭೀಮನನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಹಾಗೂ ಭೀಮನ ಬಳಿ ಯಾರೂ ಹೋಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
